ಶಿವಮೊಗ್ಗ: ಕೋವಿಡ್‌ನಿಂದ ಮರಣ ಹೊಂದಿದ ಪಾಲಿಕೆ ಹೊರ ಗುತ್ತಿಗೆ ನೌಕರ ಪಾಪನಾಯಕ್ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪಾಪನಾಯಕ್ ಪಾಲಿಕೆ ಯಲ್ಲಿ ಹೊರಗುತ್ತಿಗೆ ನೌಕರರಾಗಿ, ಕೊರೊನಾದಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ಪ್ರತಿನಿತ್ಯ ಪಾಲಿಕೆಯ ಚಿತಾಗಾರದಲ್ಲಿ ಸಂಸ್ಕಾರ ಮಾಡುವ ಕೆಲಸದಲ್ಲಿ ತೊಡಗಿದ್ದರು. ಈ ಹಿನ್ನೆಲೆ ಅವರು ಕೊರೊನಾ ಮಹಾಮಾರಿಗೆ ಬಲಿಯಾದರು.
ಕರ್ತವ್ಯದ ಸಂದರ್ಭದಲ್ಲೇ ಮೃತಪಟ್ಟಿರುವುದರಿಂದ ಸರ್ಕಾರ ಆದೇಶಿಸಿರುವ ಕೋವಿಡ್ಗೆ ಬಲಿಯಾದ ಕೊರೊನಾ ವಾರಿಯರ್ಗೆ 30 ಲಕ್ಷ ರೂ. ಪರಿಹಾರ ಕೊಡಬೇಕೆನ್ನುವ ಪಟ್ಟಿಯಲ್ಲಿ ಮೃತ ಪಾಪನಾಯಕ್ ಹೆಸರು ಸೇರಿಸಬೇಕೆಂದು ಪಾಲಿಕೆ ಸದಸ್ಯರು ಒತ್ತಾಯಿಸಿದ್ದರು. ಹಾಗೂ ತಕ್ಷಣದ ಪರಿಹಾರವಾಗಿ 5 ಲಕ್ಷ ರೂ ನೀಡಬೇಕು. ಮೃತರ ಪತ್ನಿಗೆ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ಆಯುಕ್ತರು ಹಾಗೂ ಮಹಾಪೌರರು ಆ ಸಂದರ್ಭದಲ್ಲಿ ತಕ್ಷಣದ ಪರಿಹಾರವಾಗಿ 3 ಲಕ್ಷ ರೂ. ಮತ್ತು ಕೆಲಸದ ಭರವಸೆಯನ್ನು ಪೌರಕಾರ್ಮಿಕರ ದಿನಾಚರಣೆಯಂದು ನೀಡಿದ್ದರು. ಆದರೆ, ಪಾಪನಾಯಕ್ ಮೃತಪಟ್ಟು 2 ತಿಂಗಳು ಕಳೆದಿದ್ದು, ಪಾಲಿಕೆಯ ವತಿಯಿಂದ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಅವರ ಪತ್ನಿಗೆ ಕೆಲಸವನ್ನು ಕೂಡ ಕೊಟ್ಟಿಲ್ಲ. ಹೀಗಾಗಿ ಮೃತರ ಪತ್ನಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸವನ್ನು ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಹೆಚ್.ಸಿ. ಯೋಗೀಶ್, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಶಾಮೀರ್ ಖಾನ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಪಾಪನಾಯಕ್ ಪತ್ನಿ ಸವಿತಾ, ರಂಗನಾಥ್, ವಿಶ್ವನಾಥ್ ಕಾಶಿ ಮೊದಲಾದವರಿದ್ದರು.