ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ದೊಡ್ಡೇರಿ ಗ್ರಾಮದ ನರೇಂದ್ರ (35) ಕೊಲೆಯಾದ ಯುವಕ. ಈತನನ್ನು ಸಿದ್ದಪುರ ತಾಂಡಾದ ನಿವಾಸಿ ಹರೀಶ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಏನಿದು ಘಟನೆ? : ಹರೀಶ್ ಹಾಗೂ ನರೇಂದ್ರ ಭದ್ರಾವತಿ ಅಂಡರ್ ಬ್ರಿಡ್ಜ್ ಬಳಿ ಬಾರ್ಗೆ ಕುಡಿಯಲು ಪ್ರತ್ಯೇಕವಾಗಿ ಹೋಗಿದ್ದಾರೆ. ಈ ವೇಳೆ, ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಬಾರ್ ಒಳಗಡೆ ಜಗಳ ನಡೆದಿದೆ. ನಂತರ, ನರೇಂದ್ರ ಬಾರ್ನಿಂದ ಹೊರ ಬಂದು ಬಸ್ ನಿಲ್ದಾಣದಿಂದ ಹೊಸ ಸೇತುವೆ ಬಳಿ ಆಟೋ ಹಿಡಿದು ಹೊರಡುವಾಗ ಹರೀಶ್ ಎಂಬಾತ ಹಿಂಬಾಲಿಸಿಕೊಂಡು ಬಂದು ನರೇಂದ್ರನಿಗೆ ಚಾಕುವಿನಿಂದ ಇರಿದು ಬಳಿಕ ಓಡಿ ಹೋಗಿದ್ದಾನೆ.
ಘಟನೆ ನಡೆದ ಕೆಲವೇ ನಿಮಿಷದಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ನರೇಂದ್ರನನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗೆ ಎಂದು ಶಿವಮೊಗ್ಗಕ್ಕೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಹರೀಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ರೌಡಿಶೀಟರ್ ಆಗಿದ್ದು, ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ಗಳು ದಾಖಲಾಗಿವೆ.
ಇದನ್ನೂ ಓದಿ : ಭದ್ರಾವತಿ ಲಾಡ್ಜ್ನಲ್ಲಿ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ
ಸ್ನೇಹಿತನ ಕೊಲೆ ಮಾಡಿದ ಆರೋಪಿಗಳು ಸೆರೆ : ಮದ್ಯ ಸೇವನೆ ಮಾಡಿರುವ ವಿಷಯವನ್ನು ತಂದೆಗೆ ಹೇಳಿರುವುದಕ್ಕೆ ಆಕ್ರೋಶಗೊಂಡು ತನ್ನ ಸ್ನೇಹಿತನನ್ನೇ ಇಬ್ಬರು ಯುವಕರು ಹತ್ಯೆ ಮಾಡಿದ ಘಟನೆ ಹಾಸನದಲ್ಲಿ ಕಳೆದ ಜು. 31 ರಂದು ನಡೆದಿತ್ತು. ಪ್ರಕಾಶ್ (32) ಕೊಲೆಯಾದ ದುರ್ದೈವಿ. ಪುನೀತ್ ಮತ್ತು ಯಶವಂತ್ ಕೊಲೆ ಮಾಡಿದ ಆರೋಪಿಗಳು ಎಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದರು.
ಹಾಸನ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದಲ್ಲಿ ಪ್ರಕಾಶ್ ಮತ್ತು ಆರೋಪಿಗಳಾದ ಪುನೀತ್, ಯಶವಂತ್ ಎಂಬ ಮೂವರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ, ಪುನೀತ್ ತಂದೆ ಕರೆ ಮಾಡಿ ನನ್ನ ಮಗ ಎಲ್ಲಿದ್ದಾನಪ್ಪ ಎಂದು ಕೇಳಿದ್ದಾರೆ. ಆಗ ಕುಡಿದ ಮತ್ತಿನಲ್ಲಿದ್ದ ಪ್ರಕಾಶ್, ನಿಮ್ಮ ಮಗ ಮದ್ಯ ಸೇವಿಸುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ಬಳಿಕ, ಮದ್ಯಪಾನ ಮಾಡಿ ಮನೆಗೆ ಹೋದ ಪುನೀತ್ನನ್ನು ತಂದೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಪುನೀತ್, ವಿಚಾರವನ್ನು ಯಶವಂತ್ಗೆ ತಿಳಿಸಿದ್ದಾನೆ. ಬಳಿಕ ಇಬ್ಬರೂ, ಪ್ರಕಾಶ್‌ನನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ, ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ್ ಸಾವನ್ನಪ್ಪಿದ್ದು, ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Hassan crime : ಮದ್ಯ ಸೇವಿಸಿದ ವಿಷಯವನ್ನು ತಂದೆಗೆ ತಿಳಿಸಿದ ಸ್ನೇಹಿತನ ಕೊಲೆ ; ಇಬ್ಬರು ಸೆರೆ