ಶಿವಮೊಗ್ಗ: ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಿ.ಹೆಚ್ ರಸ್ತೆಯಲ್ಲಿ ನಡೆದಿದೆ. ಕುಶನ್ ಚಂದು (29) ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕುಶನ್ ಚಂದು ಕೊಲೆ ನಡೆದಿದೆ ಎನ್ನಲಾಗಿದೆ. ಪರಶುರಾಮ ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ? ಕುಶನ್ ಚಂದು ತನ್ನ ಸ್ನೇಹಿತ ಸತೀಶ್ ಎಂಬಾತನ ಜೊತೆ ರಾತ್ರಿ ಹೋಟೆಲ್ವೊಂದಕ್ಕೆ ಊಟಕ್ಕೆ ತೆರಳಿದ್ದ. ಈ ವೇಳೆ, ಅಲ್ಲಿ ಆರೋಪಿ ಪರಶುರಾಮ ಭೇಟಿಯಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪರಸ್ಪರ ಜಗಳವಾಗಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.
ನಂತರ ರಸ್ತೆಯಲ್ಲಿ ಚಂದುನನ್ನು ಅಟ್ಟಾಡಿಸಿಕೊಂಡು ಬಂದಿರುವ ಪರಶುರಾಮ ಹಲ್ಲೆ ನಡೆಸಿದ್ದಾನೆ. ಕೆಳಗೆ ಬಿದ್ದಿದ್ದ ಚಂದು ಮೇಲೆ ಅಲ್ಲೇ ಪಕ್ಕದಲ್ಲಿದ್ದ ಕಲ್ಲು ಎತ್ತಿಹಾಕಿ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರ ಗಾಯಗೊಂಡಿದ್ದ ಚಂದು ಸಾವನ್ನಪ್ಪಿದ್ದಾನೆ.
ಆರೋಪಿ ಪರಶುರಾಮ ಮಹಾನಗರ ಪಾಲಿಕೆಯ ಕಸದ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿರುವ ಪರಶುರಾಮ ಮತ್ತು ಕುಶನ್ ಚಂದು ಮಧ್ಯೆ ಕೆಲ ವಿಚಾರಗಳಿಗೆ ದ್ವೇಷ ಇತ್ತು. ಇದೇ ಕಾರಣಕ್ಕೆ ಮತ್ತೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು