ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಆಗಬಾರದು ಎಂದರೆ ಜನತೆ ಸಹಕಾರ ನೀಡಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕೈಮೀರಿ ಹೋಗುತ್ತಿದೆ, ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಜನ ಸಹಕರಿಸಬೇಕು, ಲಾಕ್ಡೌನ್ ಆಗಬಾರದು, ಕರ್ಫ್ಯೂ ಮಾಡಬಾರದು ಅಂತಿದ್ದರೆ, ಸಹಕರಿಸಿ ಮಾಸ್ಕ್ ಧರಿಸಬೇಕು. ಕೋವಿಡ್ ನಿಯಮ ಪಾಲಿಸಬೇಕು, ಜನ ಸಹಕರಿಸಿದರೆ ಲಾಕ್ಡೌನ್ ಇಲ್ಲದೆ ಕೋವಿಡ್ ನಿಯಂತ್ರಣ ಮಾಡಬಹುದು ಎಂದರು.
ಮಹಾರಾಷ್ಟ್ರದಲ್ಲೂ ಕೊರೊನಾ ಹೆಚ್ಚಾಗುತ್ತಿದೆ, ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಲಾಕ್ಡೌನ್ ಮಾಡಲು ಅವಕಾಶ ಕೊಡದಂತೆ ಕ್ರಮ ಕೈಗೊಳ್ಳುತ್ತೇವೆ. ಈಗ ಲಾಕ್ಡೌನ್ ಬಗ್ಗೆ ಚಿಂತನೆ ಇಲ್ಲ. ಆದರೆ ಇದಕ್ಕೆ ಜನ ಸಹಕರಿಸಬೇಕು. ಈಗಾಗಲೇ ಸಾಕಷ್ಟು ನಷ್ಟ ಆಗಿದೆ, ನಾಳೆ ಈ ಬಗ್ಗೆ ಸಭೆ ಕರೆದಿದ್ದು, ಮಹತ್ವದ ಚರ್ಚೆ ಆಗುತ್ತದೆ ಎಂದು ಹೇಳಿದರು.
ಸಿಡಿ ಕುರಿತು ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಏನು ಬೇಕಾದರೂ ಪ್ರಸ್ತಾಪ ಮಾಡಲಿ, ಅದನ್ನು ನಾನು ಸ್ಚಾಗತಿಸುತ್ತೇನೆ. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರಿಗೆ ಯಾವುದೇ ವಿಷಯ ಪ್ರಸ್ತಾಪ ಮಾಡಲು ಸರ್ವಸ್ವತಂತ್ರವಿದೆ. ವಿರೋಧ ಪಕ್ಷದ ನಾಯಕರಾಗಿ ಅವರು ಪ್ರಸ್ತಾಪ ಮಾಡೋದು ಅಪರಾಧ ಅಲ್ಲ. ಅವರು ಸರ್ಕಾರದ ಗಮನಕ್ಕೆ ತರಲೇಬೇಕು. ನಮ್ಮ ಮಂತ್ರಿಗಳು ಎಚ್ಚರಿಕೆಯಿಂದ ಕೆಲಸ ಮಾಡಲು ಅನುಕೂಲ ಆಗುತ್ತದೆ. ಸಿದ್ದರಾಮಯ್ಯ ಏನೇ ಚರ್ಚೆ ಮಾಡಿದರೂ ಅದನ್ನು ಸ್ವಾಗತ ಮಾಡುತ್ತೇನೆ. ಅವರು ಏನು ಸಲಹೆ ಕೊಡುತ್ತಾರೋ ಅದನ್ನು ನಾನು ಸ್ವೀಕಾರ ಮಾಡಲು ಸಿದ್ದನಿದ್ದೇನೆ ಎಂದರು.
ನಾಳೆ ಸದನದಲ್ಲಿ ಯತ್ನಾಳ್ ಧರಣಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರ ಜೊತೆ ಈಗಾಗಲೇ ವೈಯಕ್ತಿಕವಾಗಿ ಮಾತಾಡಿದ್ದೇನೆ. ಮತ್ತೆ ಈ ಬಗ್ಗೆ ಚರ್ಚೆ ಮಾಡೋಕೆ ನಾನು ಬಯಸಲ್ಲ ಎಂದು ತಿಳಿಸಿದರು.