ಶಿವಮೊಗ್ಗ: ಗ್ರಾಮ ಪಂಚಾಯತಿಯ ಪಿಡಿಒ ಹಾಗೂ ಇತರೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡಿಸಿ ಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನೀತಾ ರಮೇಶ್ ಹೊಸನಗರ ತಾಲೂಕು ಪಂಚಾಯತಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರ ಧರಣಿಗೆ ಸದಸ್ಯ ನಾಗರಾಜ್ ಸಾಥ್ ನೀಡಿದ್ದಾರೆ. ಇತ್ತಿಚೇಗೆ ಹೊಸನಗರ ತಾಲೂಕಿನ ಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಬಗ್ಗೆ ತುರ್ತು ಸಭೆ ನಡೆಸಲು ಅಧ್ಯಕ್ಷರು ಸೂಚಿಸಿದ್ದರು. ಆದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ತುರ್ತು ಸಭೆಗೆ ಸಾಮಾನ್ಯ ಸಭೆಯ ಅಜೆಂಡಾವನ್ನು ಇಟ್ಟು ಸಭಾ ನೋಟಿಸ್ ಅನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೆಡಿ ಮಾಡಿರುತ್ತಾರೆ.
ಇದು ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಈ ನೋಟಿಸನ್ನು ನಾನು ನೀಡಿದ್ದಲ್ಲ ನಮ್ಮ ಸಿಬ್ಬಂದಿ ನೀಡಿರುವುದು ಎಂದು ಉಡಾಫೆ ಉತ್ತರ ಕೊಟ್ಟಾಗ ಅಭಿವೃದ್ಧಿ ಅಧಿಕಾರಿಯ ಕರ್ತವ್ಯ ನಿರ್ಲಕ್ಷ್ಯವನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಹ್ಲಾದ್, ಗಣೇಶ್ ಭಂಡಾರಿ, ನಾಗರಾಜ್ ಇತರರು ಗ್ರಾಮ ಪಂಚಾಯಿತಿ ಎದುರು ಧರಣಿ ಕುಳಿತರು. ಧರಣಿ ಕುಳಿತ ವಿಷಯ ತಿಳಿಯುತ್ತಿದ್ದಂತೆ ಇದು ವಿಕೋಪಕ್ಕೆ ಹೋಗುತ್ತದೆ ಎಂದು ಅರಿತ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಾಸಪ್ಪ ಗೌಡರವರು ಇನ್ನು ಐದು ದಿನದಲ್ಲಿ ನಿಮ್ಮ ಸಮಸ್ಯೆಯನ್ನು ಬಗೆ ಹತಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು.
ಭರವಸೆಯನ್ನು ನಂಬಿ ಧರಣಿ ಕುಳಿತ ಗ್ರಾಮ ಪಂಚಾಯಿತಿ ಸದಸ್ಯರು ಧರಣಿ ವಾಪಸ್ ತೆಗೆದುಕೊಂಡಿದ್ದರು. ಆದರೆ ಈ ಧರಣಿ ನಡೆದು ಹತ್ತು ಹದಿನೈದು ದಿನ ಕಳೆದರೂ ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನೀತಾ ರಮೇಶ್‌ರವರು ಸ್ಪಷ್ಟೀಕರಣ ಕೇಳಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಸಿಬ್ಬಂದಿಗೆ ನೋಟಿಸ್ ನೀಡಲು ಹೋದಾಗ ಸ್ವೀಕರಿಸದೇ ಬೇಜವಾಬ್ದಾರಿತನದಿಂದ ವರ್ತಿಸಿರುತ್ತಾರೆ. ಇದನ್ನು ಖಂಡಿಸಿ ಅಧ್ಯಕ್ಷರ ಮಾತಿಗೆ ಬೆಲೆಯೇ ಇಲ್ಲವೇ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಿತಾ ರಮೇಶ್ ಮತ್ತು ಸದಸ್ಯರಾದ ನಾಗರಾಜ್ ರವರು ನ್ಯಾಯ ಕೋರಿ ಹೊಸನಗರ ತಾಲೂಕು ಪಂಚಾಯತಿ ಎದುರು ಅನಿರ್ದಿಷ್ಟಾಧಿ ಧರಣಿ ಕುಳಿತಿದ್ದಾರೆ.
ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯ ಮಾರ್ಗದರ್ಶನದಂತೆ ಬೇಜವಾಬ್ದಾರಿಯಿಂದ ವರ್ತಿಸಿದ ಪಿಡಿಒರವರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ನೋಟಿಸ್ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತಾಯಿತು ಎಂಬ ಗಾದೆ ಮಾತಿನಂತೆ ಅಭಿವೃದ್ಧಿ ಅಧಿಕಾರಿ ಮೊದಲೇ ಎಚ್ಚೆತ್ತುಕೊಂಡಿದ್ದರೆ ಅಧ್ಯಕ್ಷರು ಧರಣಿ ನಡೆಸುವ ಪ್ರಮೇಯವೇ ಇರಲಿಲ್ಲ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.