ಶಿವಮೊಗ್ಗ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟಗಳ ಸಹಯೋಗದಲ್ಲಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ತೆರೆ ಬಿದ್ದಿದೆ.
ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಯುವಜನ ಮೇಳ ನಡೆದಿದ್ದು, ಇಂದಿಗೆ ಮುಕ್ತಾಯವಾಗಿದೆ. ಈ ಯುವಜನೋತ್ಸವದಲ್ಲಿ ಪಾಲ್ಗೊಂಡು ಜಾನಪದ ನೃತ್ಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಜ್ಞಾನ ಸೂರ್ಯ ಯುವ ಕಲಾ ತಂಡ ಪ್ರಥಮ ಸ್ಥಾನ ಬಾಚಿಕೊಂಡರೆ, ಮಂಡ್ಯ ಜಿಲ್ಲೆಯ ಕಿಲಾರೆಯ ಕೆವಿಎಸ್ ಕಲಾ ಬಳಗ ದ್ವಿತೀಯ ಸ್ಥಾನ, ಚಾಮರಾಜನಗರ ಜಿಲ್ಲೆಯ ಜಂಗಮ ಕಲಾ ತಂಡವು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವು.
ಜನಪದ ಗೀತೆಯಲ್ಲಿ ಮಂಡ್ಯ ಜಿಲ್ಲೆ ಕಿಲಾರೆಯ ಕೆ ವಿ ಶಂಕರೇಗೌಡ ಸ್ಮಾರಕ ಯುವ ಜನ ಸಂಘ ಪ್ರಥಮ ಸ್ಥಾನ ಪಡೆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಗೆರೆಯ ಕೆ ಪಿ ಪೂರ್ಣಚಂದ್ರ ತೇಜಸ್ವಿ ಕಲಾ ತಂಡ ದ್ವಿತೀಯ ಸ್ಥಾನ ಹಾಗೂ ಚಾಮರಾಜನಗರ ಜಿಲ್ಲೆಯ ಕೈಲಾಸ ಮೂರ್ತಿ ತಂಡ, ಕೊಪ್ಪಳ ಜಿಲ್ಲೆಯ ಜ್ಯೋತಿ ಮಹಿಳಾ ಸಾಂಸ್ಕೃತಿಕ ಸಂಘಗಳು ಜಂಟಿಯಾಗಿ ತೃತೀಯ ಸ್ಥಾನ ಪಡೆದವು.
ಭರತನಾಟ್ಯದಲ್ಲಿ ಮಂಡ್ಯ ಜಿಲ್ಲೆ, ಕಥಕ್‌ನಲ್ಲಿ ದಾವಣಗೆರೆ, ಕುಚುಪಡಿಯಲ್ಲಿ ಮೈಸೂರು, ಮಣಿಪುರಿಯಲ್ಲಿ ಮಂಡ್ಯ, ಗಿಟಾರ್‌ನಲ್ಲಿ ಹಾವೇರಿ ಜಿಲ್ಲೆ ಮತ್ತು ಶಾಸ್ತ್ರೀಯ ವಾದ್ಯ ವೀಣೆ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ವೈಷ್ಣವಿ ಪ್ರಥಮ ಸ್ಥಾನ ಬಾಚಿಕೊಂಡರು.