ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕುವೆಂಪು ವಿಶ್ವವಿದ್ಯಾಲಯವು 'ನಮ್ಮ ನಡಿಗೆ ಈಸೂರು ಕಡೆಗೆ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ಗ್ರಾಮಕ್ಕೆ ಬ್ರಿಟಿಷರ ಪ್ರವೇಶ ನಿಷೇಧಿಸಿದ ಸ್ವಾತಂತ್ರ್ಯ ಪ್ರೇಮಿಗಳು ಹುತಾತ್ಮರಾದ ಸ್ಮಾರಕಕ್ಕೆ ಮೊದಲು ನಮನ ಸಲ್ಲಿಸಿ ನಂತರ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಮ್ಮ ನಡಿಗೆ ಈಸೂರು ಕಡೆಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾತ್ಮರು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟವನ್ನು ನಾವು ಓದಿನಲ್ಲಿ ಮಾತ್ರ ತಿಳಿದುಕೊಂಡಿದ್ದೇವೆ. ಕೇವಲ ಖಾದಿ ಧ್ವಜ ಹಾರಿಸಬೇಕೆಂಬ ನಿಬಂಧನೆಯನ್ನು ಕೇಂದ್ರ ಸರ್ಕಾರ ತೆಗೆದು ಹಾಕಿ ಪ್ರತಿಮನೆಯ ಮೇಲೂ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿದೆ ಎಂದರು.
ವಿಶ್ವವಂದಿತವಾದ ಭಾರತ ಮೊಗಲರು, ಬ್ರಿಟಿಷರ ದಾಳಿಯಿಂದ ತನ್ನ ತನವನ್ನು ಕಳೆದುಕೊಂಡಿತ್ತು. ಅದನ್ನು ಮರು ಸ್ಥಾಪಿಸುವುದು ನಮ್ಮ ಕೆಲಸವಾಗಿದೆ. ಭಾರತವನ್ನು ಪ್ರಪಂಚದ ಶ್ರೇಷ್ಠ ದೇಶವನ್ನಾಗಿ ಮಾಡಬೇಕಿದೆ. ಅದಕ್ಕೆ ನಮ್ಮ ಕೆಲಸ ಪ್ರಾಮಾಣಿಕವಾಗಿರಬೇಕಿದೆ. ಈಸೂರು ಸ್ಮಾರಕಕ್ಕೆ ಕೇಂದ್ರ ಸರ್ಕಾರವು ಕೈ ಜೋಡಿಸಲಿದೆ ಎಂದರು.
ನಂತರ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಈಸೂರು ಗ್ರಾಮ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ನೆಲವಾಗಿದೆ. ನಾವೆಲ್ಲ ಈ ಭಾಗದವರು ಎಂದು ಹೇಳುವುದೇ ನಮ್ಮ ಪುಣ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯಲ್ಲಿ ಈಸೂರಿನ ಹಲವರನ್ನು ಗಲ್ಲಿಗೆ ಏರಿಸಲಾಯಿತು. ಅನೇಕರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಇತಿಹಾಸ ನೆನೆದರು.
ಸ್ವಾತಂತ್ರ್ಯಕ್ಕೂ ಮುನ್ನವೇ ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರು ಗ್ರಾಮ ಎಲ್ಲರಿಗೂ ಸ್ಫೂರ್ತಿಯಾಗಿದೆ. ಇಂತಹ ನೆಲವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವರನ್ನು ಇಲ್ಲಿಗೆ ಕಳುಹಿಸಿ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಮೋದಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಲಪ್ಪ ಹರತಾಳು, ಕುವೆಂಪು ವಿವಿ ಕುಲಪತಿ ಪ್ರೋ. ವೀರಭದ್ರಪ್ಪ, ಕುಲ ಸಚಿವೆ ಅನುರಾಧ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ : ಟ್ರ್ಯಾಕ್ಟರ್ ಓಡಿಸಿ ತಿರಂಗಾ ಮೆರವಣಿಗೆಗೆ ಚಾಲನೆ ನೀಡಿದ ಸಿಟಿ ರವಿ