ಶಿವಮೊಗ್ಗ: ಆಫ್ಘಾನಿಸ್ತಾನದಲ್ಲಿ ಒಂದೇ ಧರ್ಮದವರು ಬಡಿದಾಡುವುದನ್ನು ನೋಡಿದ್ರೆ, ವಿಶ್ವಕ್ಕೆ ಶಾಂತಿಯನ್ನು ನೀಡುವುದು ಹಿಂದೂ ಧರ್ಮ ಮಾತ್ರ ಎಂದೆನ್ನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಬಿಜೆಪಿ ಯುವ ಮೂರ್ಚಾದ ವತಿಯಿಂದ ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವ ಅಂಗವಾಗಿ ನಡೆದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ರಾಷ್ಟ್ರ ಭಾರತ ಮಾತ್ರವಾಗಿದೆ. ಶಾಂತಿಯಿಂದ ಹಳ್ಳಿಯಿಂದ ದಿಲ್ಲಿವರೆಗೂ ಜನ ನೆಮ್ಮದಿಯಿಂದ ಇರುವಂತಹ ದೇಶ ಭಾರತ ಮಾತ್ರ ಎಂದರು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸುತ್ತಿರುವ ದ್ವೇಷ ಆಕ್ರೋಶ, ಕಗ್ಗೂಲೆ, ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯ ನೋಡಿದ್ರೆ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ದೇಶದ ಸ್ವಯಂಘೋಷಿತ ವಿಚಾರವಾದಿಗಳು ಆಫ್ಘಾನಿಸ್ತಾನದಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ನಾವು ಸರ್ವೇ ಜನಃ ಸುಖಿನೋ ಭಯತೋ ಎನ್ನುವವರು. ಎಲ್ಲರೂ ಸುಖವಾಗಿರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿರುವವರು. ದೇಶದಲ್ಲಿ ರಾಷ್ಟ್ರದ್ರೋಹಿಗಳು, ಉಗ್ರವಾದಿಗಳು ಇದ್ದಾರೆ. ಅವರನ್ನು ಸದೆಬಡಿಯುವ ಕಾರ್ಯ ಮಾಡೋಣ, ನಾವು ಯಾರ ಸುದ್ದಿಗೂ ಹೋಗಲ್ಲ, ನಮ್ಮ ಸುದ್ದಿಗೆ ಬಂದ್ರೆ ಬಿಡಲ್ಲ, ಇದೆಲ್ಲಾ ಹಿಂದಿನಿಂದಲೂ ಬಂದ ನಮ್ಮ ವಿಚಾರಧಾರೆಗಳು ಎಂದರು.
ಓದಿ: ನನ್ನ ಕೈಗೆ 5 ವರ್ಷ ಸರ್ಕಾರ ಕೊಟ್ಟರೆ ಕ್ರಾಂತಿಕಾರಕ ಬದಲಾವಣೆ ಮಾಡುತ್ತೇನೆ: ಹೆಚ್ಡಿಕೆ