ಶಿವಮೊಗ್ಗ: ಜಿಲ್ಲೆಯ ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವ ಉದ್ದೇಶದಿಂದ ಸ್ಥಳದಲ್ಲಿದ್ದ ಅರಳಿಮರವನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ವೇಳೆ ಭೂಮಿಯ ಅಡಿ ಪ್ರಾಚೀನ ಕಾಲದ ಗಣೇಶನ ವಿಗ್ರಹ ಪತ್ತೆಯಾಗಿದೆ.
ಇಲ್ಲೇ ಪಕ್ಕದಲ್ಲಿ ಅಂತರಘಟ್ಟಮ್ಮ ದೇವಾಲಯವಿದ್ದು, ಇದಕ್ಕೆ ಸಂಬಂಧಿಸಿದ ನಾಗದೇವರ ವಿಗ್ರಹ ಕೂಡ ಇದೇ ಸ್ಥಳದಲ್ಲಿ ಪತ್ತೆಯಾಗಿತ್ತು ಎಂದು ಹಿರಿಯರು ತಿಳಿಸಿದರು. ಅಲ್ಲದೇ, ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು ಇನ್ನಷ್ಟು ಪುರಾವೆಗಳು ಅಲ್ಲಿ ಲಭ್ಯವಾಗಬಹುದು ಎಂದು ಅಲ್ಲಿಯ ಹಿರಿಯರು ತಿಳಿಸಿದ್ದು, ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಹಾಗೂ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಒತ್ತಾಯದ ಮೇರೆಗೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ವಿಗ್ರಹವನ್ನು ಸಂರಕ್ಷಿಸಲಾಗಿದೆ. ಇನ್ನು ಸ್ಥಳೀಯರು ಆ ಸ್ಥಳದಲ್ಲಿ ಭಗವಾಧ್ವಜ ನೆಟ್ಟು ಪೂಜೆ ಕೂಡ ಸಲ್ಲಿಸಿದ್ದಾರೆ.
ಇದನ್ನೂ ಓದಿ: 600 ವರ್ಷ ಹಳೆಯ ತಿರುಮಲ ವಿಗ್ರಹ ಪತ್ತೆ: ತಮಿಳುನಾಡಿನಲ್ಲಿ ಸಿಕ್ತು ಮಂಡ್ಯ ಮೂಲದ ವಿಗ್ರಹ