ಶಿವಮೊಗ್ಗ: ರಾಜ್ಯಪಾಲರು ಭಾಷಣ ಮಾಡುವ ವೇಳೆ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಡ್ಡಿಪಡಿಸಿದ ಘಟನೆ ಇಂದು ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ನಡೆಯಿತು. ಕುವೆಂಪು ವಿವಿಯ ಬಸವ ಭವನದಲ್ಲಿ 33ನೇ ಘಟಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಬಸವ ಭವನದ ಮೇಲ್ಭಾಗದ ಹಾಲ್ ನಲ್ಲಿದ್ದ NSUI ಕಾರ್ಯಕರ್ತರು ಏಕಾಏಕಿ ಕುವೆಂಪು ವಿವಿಯ ಕುಲಪತಿ ಪ್ರೊ. ವೀರಭದ್ರಪ್ಪ ಅವರ ವಿರುದ್ಧ ಧಿಕ್ಕಾರ ಕೂಗಲು ಪ್ರಾರಂಭಿಸಿದರು.
ಇದರಿಂದ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ಉಂಟಾಗಿತ್ತು. ಘೋಷಣೆ ಕೂಗುತ್ತಿದ್ದಂತೆ ರಾಜ್ಯಪಾಲರ ಅಂಗರಕ್ಷಕರು ಅಲರ್ಟ್ ಅದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಭಾಷಣ ಮುಗಿಸಿ ವಾಪಸ್ ಆದ ರಾಜ್ಯಪಾಲರು, ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರನ್ನು ಕರೆಯಿಸಿ ಪ್ರತಿಭಟನೆ ನಡೆಸಿದ್ದು, ಯಾಕೆ ಎಂದು ಕಾರಣ ಕೇಳಿ ಮಾಹಿತಿ ಪಡೆದುಕೊಂಡು ವಾಪಸ್ ಆದರು ಎಂದು NSUI ಜಿಲ್ಲಾಧ್ಯಕ್ಷ ವಿಜಯ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಇಲ್ಲಿನ ಸಮಸ್ಯೆ ಬಗ್ಗೆ ಹಲವಾರು ಬಾರಿ ಕುವೆಂಪು ವಿವಿಯ ವಿಸಿ ಅವರಿಗೆ ಮನವಿ ಪತ್ರವನ್ನು ನೀಡುತ್ತ ಬಂದಿದ್ದೇವೆ. ಆದರೂ ಈವರೆಗೆ ಯವುದೇ ಸಮಸ್ಯೆಗಳು ಬಗೆಹರಿದಿಲ್ಲ. ಈ ಬಗ್ಗೆ ಇದೇ 7ನೇ ತಾರೀಖಿನಂದು ಪ್ರತಿಭಟನೆ ಮಾಡಿದ್ದೆವು. ಆ ಸಂದರ್ಭ 20ನೇ ತಾರೀಖಿನೊಳಗೆ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೇ ಅವರ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ'' ಎಂದು ಆರೋಪಿಸಿದರು.
ಹಾಗಾಗಿ ಇಂದು ಕಾಲೇಜಿನಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಿದ್ದರು. ಅವರ ಮುಂದೆಯೇ ಪ್ರತಿಭಟನೆ ಮಾಡಿದೆವು. ಕಾರ್ಯಕ್ರಮದ ಬಳಿಕ ರಾಜ್ಯಪಾಲರು ನಮ್ಮನ್ನು ಕರೆದು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದು, ನಾಲ್ಕು ದಿನಗಳವರೆಗೆ ಸಮಯ ನೀಡಿ ಎಂದು ಹೇಳಿದ್ದಾರೆ. ಹಾಗೆಯೇ ನಿಮ್ಮ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಒಂದು ಪತ್ರದಲ್ಲಿ ಬರೆದುಕೊಡುವಂತೆ ಹೇಳಿದ್ದಾರೆ. ನಾವು ಇಲ್ಲಿ ನಡೆದ ಅವ್ಯವಹಾರದ ಕುರಿತು ಗಮನ ಸೆಳೆಯಲು ಬಂದಿದ್ದೆವು ಎಂದು NSUI ಜಿಲ್ಲಾಧ್ಯಕ್ಷ ವಿಜಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ಗೋರಖ್ಪುರ ವಿವಿ ಕುಲಪತಿ, ರಿಜಿಸ್ಟ್ರಾರ್ ಮೇಲೆ ಎಬಿವಿಪಿ ಪ್ರತಿಭಟನಾಕಾರರಿಂದ ತೀವ್ರ ಹಲ್ಲೆ