ಶಿವಮೊಗ್ಗ: ಹುಣಸೋಡು ಗ್ರಾಮದ ಕಲ್ಲುಗಣಿಗಾರಿಕೆಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ನಡೆದು ಒಂದು ವರ್ಷ ಕಳೆದರೂ ಜಿಲ್ಲಾಡಳಿತ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿಲ್ಲ ಎಂದು ಹುಣಸೋಡು ಸುತ್ತುಮುತ್ತಲಿನ ಸಂತ್ರಸ್ತರು ಆರೋಪಿಸಿದ್ದಾರೆ.
ನಗರದ ಹೊರ ವಲಯದ ಹುಣಸೋಡು ಬಳಿ 2021ರ ಜನವರಿ 21ರಂದು ರಾತ್ರಿ ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು, ಸಿಡಿಮದ್ದುಗಳು ಸ್ಫೋಟಗೊಂಡು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಸಹ ಭೂಕಂಪದ ಅನುಭವವಾಗಿತ್ತು.
ಹುಣಸೋಡಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಸುತ್ತಮುತ್ತಲಿನ ಗ್ರಾಮಗಳಾದ ಬಸವನಗಂಗೂರು, ಅಬ್ಬಲಗೆರೆ, ಕಲ್ಲುಗಂಗೂರು, ಬೊಮ್ಮನಕಟ್ಟೆಗಳಲ್ಲಿ ನೂರಾರು ಮನೆಗಳು ಬಿರುಕು ಬಿಟ್ಟಿದ್ದವು.
ಶಬ್ದಕ್ಕೆ ಅನೇಕ ಜಾನುವಾರುಗಳು ಓಡಿ ಹೋಗಿದ್ದವು. ಸ್ಫೋಟದ ನಂತರ ಬಿರುಕು ಬಿಟ್ಟ ಮನೆಗಳಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಬಿರುಕು ಬಿಟ್ಟಿದ್ದ ಮನೆಗಳು ನಂತರ ಮಳೆಯಲ್ಲಿ ಬಿದ್ದು ಹೋಗಿವೆ.
ಇದನ್ನೂ ಓದಿ: BREAKING : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು.. ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ..
ಸ್ಫೋಟಗೊಂಡ ನಂತರ ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಯಾರನ್ನು ಸಹ ಅಮಾನತು ಮಾಡದೆ ಜಿಲ್ಲಾಡಳಿತ ಜಾಣ ಕುರುಡುತನ ಪ್ರದರ್ಶನ ಮಾಡಿತು. ಅಲ್ಲದೆ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ಶೇ.10ರಷ್ಟು ಪರಿಹಾರ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಕೊನೆಗೆ ಪರಿಹಾರ ನೀಡದೆ ಸುಮ್ಮನೆ ಕುಳಿತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಮೊದಲು ಪರಿಹಾರ ಕೊಡಿಸುವುದಾಗಿ ಹೇಳಿದ್ದು, ಈಗ ಪರಿಹಾರ ಕೊಡಿಸಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರಿಂದ ಕೋಪಗೊಂಡ ಗ್ರಾಮಸ್ಥರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರತಿಭಟನೆ ನಡೆಸಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇತ್ತ ಪೊಲೀಸ್ ಇಲಾಖೆ ಯಾರು ಸ್ಫೋಟಕ ವಸ್ತುಗಳನ್ನು ತರಿಸಿಕೊಂಡಿದ್ದರೋ ಅವರನ್ನು ಬಿಟ್ಟು ಸ್ಫೋಟವಾದ ಕಲ್ಲುಕ್ವಾರಿಯ ಮಾಲೀಕ, ಮ್ಯಾನೇಜರ್ ಹಾಗೂ ಸ್ಫೋಟ ನೀಡಿದ ಏಜೆನ್ಸಿಯ ಮಾಲೀಕರನ್ನು ಅರೆಸ್ಟ್ ಎಂದು ತೋರಿಸಿ ಜನರ ಬಾಯಿ ಮುಚ್ಚಿಸಿದ್ದಾರೆ.
ಹುಣಸೋಡು ಸ್ಫೋಟ ಪ್ರಕರಣದಂತಯೇ ಚಿಕ್ಕಬಳ್ಳಾಪುರದಲ್ಲೂ ನಡೆದಾಗ ಅಲ್ಲಿನ ಸಂಬಂಧಿತ ಠಾಣೆಯ ಪಿಎಸ್ಐ ಹಾಗೂ ಆರ್ಐಗಳನ್ನು ಅಮಾನತು ಮಾಡಿತ್ತು. ಆದರೆ, ಶಿವಮೊಗ್ಗದಲ್ಲಿ ಕೇವಲ ತನಿಖೆ ಹೆಸರಿನಲ್ಲಿ ನಿಜವಾದ ಆರೋಪಿಗಳನ್ನು ಕೈಬಿಟ್ಟಿದ್ದಾರೆ ಎಂಬ ಆರೋಪವಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ