ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಾಣಿಪ್ರಿಯರ ಬಹುದಿನದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ. ಪ್ರಾಣಿಪ್ರಿಯರು ತಮ್ಮ ಸಾಕು ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರಾದರೇ ಶಸ್ತ್ರಚಿಕಿತ್ಸೆ ಕೊಡಿಸಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಇದೀಗ ಅದಕ್ಕೆಲ್ಲಾ ಮುಕ್ತಿ ದೊರಕುವ ಕಾಲ ಬಂದಿದ್ದು, ಶಿವಮೊಗ್ಗದಲ್ಲಿ ಸುಸಜ್ಜಿತ ಜಿಲ್ಲಾ ಪಶು ವೈದ್ಯಕೀಯ ಪಾಲಿಕ್ಲಿನಿಕ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಕುವೆಂಪು ನಗರದಲ್ಲಿ ಸುಮಾರು 2.11 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದು, ಶಂಕುಸ್ಥಾಪನೆ ಸಹ ನೆರವೇರಿಸಲಾಗಿದೆ.
ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲೂ ಸಹ ಪಶು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾದ ಆಸ್ಪತ್ರೆಯ ಕೊರತೆ ಎದುರಾಗಿತ್ತು. ಸ್ಕ್ಯಾನಿಂಗ್, ಎಕ್ಸ್ರೇ, ರಕ್ತ ಪರೀಕ್ಷೆ ಸೇರಿದಂತೆ ಸುಸಜ್ಜಿತ ಲ್ಯಾಬ್ ವ್ಯವಸ್ಥೆ ಇಲ್ಲಿ ಲಭ್ಯವಾಗಲಿದೆ.
ಈ ಆಸ್ಪತ್ರೆಯಲ್ಲಿ ಸರ್ಜರಿ, ಗೈನಕಾಲಜಿ ಮತ್ತು ಮೆಡಿಸಿನ್ ಮೂರು ವಿಭಾಗಗಳಿರಲಿದ್ದು, ತಜ್ಞ ವೈದ್ಯರು ಸೇವೆ ಲಭ್ಯವಾಗಲಿದೆ.
2.11ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, 8 ತಿಂಗಳ ಒಳಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲಾ ಮಟ್ಟದಲ್ಲಿ ಇದು ರೆಫರಲ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದ್ದು, ಇಲ್ಲಿ ಪ್ರಾಣಿಗಳಿಗೆ ಎಲ್ಲಾ ವಿಧದ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಲಭ್ಯವಾಗಲಿದೆ.