ಶಿವಮೊಗ್ಗ : ಮಲೆನಾಡಿನ ಭಾಗಗಳಾದ ಶರಾವತಿ ಹಿನ್ನೀರಿನ ಪ್ರದೇಶಗಳಾದ ತುಮರಿ, ಕಟ್ಟಿನ ಕಾರು ಸೇರಿದಂತೆ ವಿವಿಧ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಜನರು ಪರದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಭಾಗದ ಜನ ಪಕ್ಷಾತೀತವಾಗಿ ಈ ಭಾರಿ ನೋ ನೆಟ್ವರ್ಕ್.. ನೋ ವೋಟಿಂಗ್ ಎಂಬ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಈ ಸಂಬಂಧ ಇಂದು ಮೊಬೈಲ್ ಕಂಪನಿಗಳ ಜೊತೆ ಡಿಸಿ ಸೇರಿದಂತೆ ಜಿಲ್ಲೆಯ ಪ್ರತಿನಿಧಿಗಳು ಸಭೆ ನಡೆಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ನವರ ಜೊತೆ ಜಿಲ್ಲೆಯ ಬಿಎಸ್ಎನ್ಎಲ್, ಏರ್‌ಟೆಲ್, ಜಿಯೋ ಸೇರಿದಂತೆ ಉಳಿದ ಖಾಸಗಿ ಮೊಬೈಲ್ ಕಂಪನಿಗಳ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.
ಜಿಲ್ಲೆಯಲ್ಲಿ ಕೆಲಸದಲ್ಲಿರುವವರು ಲಾಕ್ಡೌನ್ನಿಂದಾಗಿ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಕೇಳುತ್ತಿದ್ದಾರೆ. ಆದರೆ, ನೆಟ್ವರ್ಕ್ ಸಮಸ್ಯೆಯಿಂದ ಈ ಭಾಗದಲ್ಲಿ ಜನರು ನಡೆಸುತ್ತಿರುವ ಪರದಾಟದ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.
ಇದೇ ವೇಳೆ ಜಿಲ್ಲೆಯ ಬಿಎಸ್ಎನ್ಎಲ್ ಡಿಜಿಎಂ ವೆಂಕಟೇಶ್ರವರು ಟವರ್ ಹಾಕಲು ಹಾಗೂ ಇರುವ ಟವರ್ನಲ್ಲಿನ ಸಮಸ್ಯೆ ಪರಿಹಾರಕ್ಕೆ ಜನರೇಟರ್ ಹಾಗೂ ಬ್ಯಾಟರಿಯ ಸಮಸ್ಯೆಯನ್ನು ತಿಳಿಸಿದರು. ಇನ್ನೂ ಖಾಸಗಿ ಕಂಪನಿಯ ಪ್ರತಿನಿಧಿಗಳು ತಾವಿನ್ನೂ ಸರ್ವೆ ನಡೆಸುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಬಿಎಸ್ಎನ್ಎಲ್ನಿಂದ ಗ್ರಾಪಂಗಳಿಗೆ ಸಂಪರ್ಕ ನೀಡಿದ್ದು, ಅದರಿಂದ ಸ್ಥಳೀಯವಾಗಿ ಉಪಯೋಗ ಹೇಗೆ ಪಡೆಯಬಹುದು ಎಂಬ ಚರ್ಚೆ ನಡೆಸಲಾಯಿತು. ಅಧಿಕಾರಿಗಳ ಸಮಜಾಯಿಷಿಗೆ ಬೇಸರಗೊಂಡ ಸಂಸದರು ಹಾಗೂ ಶಾಸಕರು ಕಾರಣ ನೀಡದೆ ಜನತೆಗೆ ಸೇವೆ ಒದಗಿಸಬೇಕು.
ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ ಎಂಬ ಕಾರಣಕ್ಕೆ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದು ಸೂಕ್ತವಾಗಿದೆ. ಇದರಿಂದ ಮುಂದಿನ ಶನಿವಾರ ಬೆಂಗಳೂರಿನಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಾನು ಸಂಸದನಾದ ನಂತರ ಎರಡು ವರ್ಷದಲ್ಲಿ ನಾಲ್ಕು ಸಭೆ ನಡೆಸಿದ್ದೇನೆ. ಹಿಂದೆ 200ಕ್ಕೂ ಅಧಿಕ ಟವರ್‌ಗಳು ಬೇಕಿದ್ದವು. ಸಭೆಗಳ ಪ್ರತಿಫಲವಾಗಿ ಈಗ 150ಕ್ಕೂ ಅಧಿಕ ಟವರ್ಗಳನ್ನು ನಿರ್ಮಿಸಲಾಗಿದೆ.
ಆದರೆ, ಅವಶ್ಯಕವಿರುವ ಕಡೆ ಟವರ್ಗಳನ್ನು ಹಾಕಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಅದಷ್ಟು ಬೇಗ ಟವರ್ ಸಂಪರ್ಕ ನೀಡುವಂತೆ ಸೂಚನೆ ನೀಡಿದ್ದೇನೆ. ಖಾಸಗಿಯವರಿಗೆ ಸರ್ಕಾರದ ಕಡೆಯಿಂದ ಏನು ಸಹಾಯ ಮಾಡಬೇಕೋ ಅದನ್ನು ಮಾಡಲಾಗುವುದು ಎಂದರು.
ಬಳಿಕ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನೋ ನೆಟ್ವರ್ಕ್.. ನೋ ವೋಟಿಂಗ್ ಅಭಿಯಾನಕ್ಕೆ ನಾನು ಬೆಂಬಲ ಸೂಚಿಸಿದ್ದೇನೆ. ಇಲ್ಲಿ ಇರುವ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಿದ್ದೇವೆ. ಟವರ್‌ಗಳು ಬರುವ ತನಕ ಅಧಿಕಾರಿಗಳಿಗೆ ಬಿಡುವುದಿಲ್ಲ. ಆದರೆ, ಇಲ್ಲಿ ಸಣ್ಣ ರಾಜಕೀಯ ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್.ಎಸಿ ನಾಗೇಂದ್ರ, ಜಿ.ಪಂ ಸಿಇಒ ಶ್ರೀಮತಿ ವೈಶಾಲಿ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.