ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶದ ಪ್ರಕಾರ ನಂದಿನಿ ಹಾಲಿನ ದರ ನಾಳೆಯಿಂದ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ(ಶಿಮುಲ್) ಅಧ್ಯಕ್ಷ ಎನ್.ಹೆಚ್. ಶ್ರೀಪಾದರಾವ್ ಅವರು ತಿಳಿಸಿದ್ದಾರೆ. ಮಾಚೇನಹಳ್ಳಿಯ ಶಿಮುಲ್‌ನ ಆಡಳಿತ ಕಚೇರಿಯಲ್ಲಿ ನಿರ್ದೇಶಕರ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ಹೈನುಗಾರಿಕೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ರೈತರಿಗೆ ಹಾಲಿನ ದರವನ್ನು ಏರಿಕೆ ಮಾಡದೇ ಹೋದರೆ, ಹಸುಗಳ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ ಸರ್ಕಾರ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈಗ ಗ್ರಾಹಕರಿಗೆ ಒಂದು ಲೀಟರ್ ಹಾಲಿನ ದರ 42 ರೂ. ಆಗುತ್ತದೆ. ಅರ್ಧ ಲೀಟರ್ ಹಾಲಿನ ದರ 22 ರೂ. ಟೋನ್ಡ್ ಹಾಲು ಒಂದು ಲೀಟರ್‌ಗೆ 42 ರೂ. ಅರ್ಧ ಲೀಟರ್ ಮೊಸರು 26 ರೂ. 200 ಗ್ರಾಂ ಮೊಸರಿನ ದರ 12 ರೂ. ಆಗಿದೆ. ಇಂದು ನಡೆದ ಶಿಮುಲ್‌ನ 436 ನೇ ತುರ್ತು ಆಡಳಿತ ಮಂಡಳಿಯ ಸಭೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಹಾಲು ಮತ್ತು ಮೊಸರಿನ ಮಾರಾಟದ ದರಗಳನ್ನು ದಿನಾಂಕ 01.08.2023 ರಿಂದ 3 ರೂ. ರಂತೆ ಹೆಚ್ಚಿಸಿ ಪರಿಷ್ಕರಿಸಲಾಗಿರುತ್ತದೆ ಎಂದರು.
ಪ್ರತಿ ಲೀಟರ್‌ಗೆ ರೂ. 3 ರೂ. ರಂತೆ ಮಾರಾಟದ ದರ ಹೆಚ್ಚಿಸಿದಲ್ಲಿ 500 ಮಿಲೀ ಒಂದು ಪ್ಯಾಕೆಟ್‌ಗೆ ರೂ. 1.50 ರಂತೆ ಹೆಚ್ಚಿಸಬೇಕಾಗಿರುತ್ತದೆ. ಇದರಿಂದಾಗಿ ರೂ. 1.50 ರಂತೆ ಹೆಚ್ಚಿಸಿದಲ್ಲಿ ಚಿಲ್ಲರೆ ಅಭಾವದಿಂದಾಗಿ ಯಥೇಚ್ಚವಾಗಿ ಗ್ರಾಹಕರಿಂದ ಮತ್ತು ಮಾರಾಟಗಾರರಿಂದ ದೂರುಗಳು ಬರುವ ಸಂಭವವಿದೆ. ಈ ಹಿನ್ನೆಲೆಯಲ್ಲಿ 500 ಮಿ.ಲೀ. ಪ್ರತಿ ಪ್ಯಾಕೆಟ್‌ಗೆ 10 ಮಿ.ಲೀ ಹೆಚ್ಚಾಗಿ ನೀಡಿ, ಹೆಚ್ಚುವರಿ ನೀಡುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ 10 ಎಂಎಲ್ ಎಂದು ಮುದ್ರಿಸಿ ಪ್ರತಿ 500 ಮಿ.ಲೀ ಪ್ಯಾಕೆಟ್‌ಗೆ ರೂ. 2 ರಂತೆ ಹೆಚ್ಚಿಸಲಾಗಿರುತ್ತದೆ ಎಂದು ಶಿಮುಲ್ ತಿಳಿಸಿದೆ.
ಒಕ್ಕೂಟವು ಸಂಘಗಳಿಂದ/ಉತ್ಪಾದಕರಿಂದ ಖರೀದಿಸುವ ಹಾಲಿನ ಪರಿಷ್ಕರಿಸಿದ ಖರೀದಿ ದರದ ವಿವರಗಳು: ಒಕ್ಕೂಟದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ (ರೂ. ಗಳಲ್ಲಿ ಪ್ರತಿ ಕೆ.ಜಿ ಹಾಲಿಗೆ)(FAT 4.0 SNE 8.50%)-33.71 ರೂ. ಒಕ್ಕೂಟದಿಂದ ಸಂಘಗಳಿಗೆ ಪರಿಷ್ಕೃತ ದರ ದಿನಾಂಕ 01.08.2023 ರಿಂದ ನೀಡುವ ದರ (ರೂ. ಗಳಲ್ಲಿ ಪ್ರತಿ ಕೆ.ಜಿ ಹಾಲಿಗೆ) (FAT 4.0 SNF 8.50%) -36.83 ರೂ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ FAT 4.0% SNF 8.50% 2 -31.85 ರೂ ಆಗಿದೆ. ಸಂಘದಿಂದ ಉತ್ಪಾದಕರಿಗೆ ಪರಿಷ್ಕೃತ ದರ ದಿನಾಂಕ 01.08.2023 ರಿಂದ ನೀಡುವ ದರ. FAT 4.0% SNF 8.50% ಗೆ - 34.97 ರೂ. ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಹೈನುಗಾರಿಕೆಯನ್ನು ಉತ್ತೇಜಿಸಲು ಗ್ರಾಹಕರು ಎಂದಿನಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಹಕರಿಸಬೇಕಾಗಿ ಶಿಮುಲ್ ಕೋರಿದೆ.
ಇನ್ನು ಮಾಧ್ಯಮಗೋಷ್ಟಿಯಲ್ಲಿ ಶಿಮುಲ್ ಉಪಾಧ್ಯಕ್ಷರಾದ ಹೆಚ್ ಕೆ ಬಸಪ್ಪ, ನಿರ್ದೇಶಕರುಗಳಾದ ಸಿ. ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಸಹಕಾರ ಸಂಘಗಳ ಜಂಟಿ ನಿಬಂಧಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Nandini Milk Price: ನಂದಿನಿ ಹಾಲು ಲೀಟರ್‌ಗೆ ₹3 ಹೆಚ್ಚಳ: ಆಗಸ್ಟ್ 1ರಿಂದ ಹೊಸ ದರ ಜಾರಿ- ಎಲ್.ಭೀಮನಾಯ್ಕ