ಶಿವಮೊಗ್ಗ: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಡುವೆ ಪಾರ್ಕಿಂಗ್ ವ್ಯವಸ್ಥೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದಕ್ಕೆ ಇತಿಶ್ರೀ ಹಾಡುವುದಕ್ಕಾಗಿ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಮಲ್ಟಿ ಲೆವಲ್ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದೆ.
ನಗರದಲ್ಲಿ ವಾಹನ ದಟ್ಟನೆ ಮೀತಿಮೀರಿದ್ದು, ಪಾರ್ಕಿಂಗ್ ಸಮಸ್ಯೆ ಬಹುದೊಡ್ಡ ತಲೆನೋವಾಗಿದೆ. ಹಾಗಾಗಿ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಶಿವಪ್ಪನಾಯಕ ಹೂವಿನ ಮಾರ್ಕೆಟ್ ಇರುವ ಜಾಗದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಂದಾಜು 30 ಕೋಟಿ ರೂ ವೆಚ್ಚದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರಿಗೆ ಹನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು ಸಹ ನೀಡಲಾಗಿದೆ. ನಗರದ ಶಿವಪ್ಪನಾಯಕ ಹೂವಿನ ಮಾರ್ಕೆಟ್ ಅನ್ನು ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಬಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಹೂವಿನ ವ್ಯಾಪಾರಸ್ಥರಿಗೆ ಪರ್ಯಾಯ ಜಾಗವನ್ನು ಸಹ ಗುರುತಿಸಿ ವ್ಯವಸ್ಥೆ ಮಾಡಲಾಗಿದೆ. ಹೂವಿನ ಮಾರ್ಕೆಟ್ ಜಾಗದಲ್ಲಿ ಮೂರು ಮಹಡಿಯ ಕಟ್ಟಡ ನಿರ್ಮಿಸಲಾಗುತ್ತದೆ.
ಗ್ರೌಂಡ್ ಫ್ಲೋರ್ನಲ್ಲಿ ಹೂವಿನ ಅಂಗಡಿಗಳಿಗಾಗಿ 118 ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಹಾಗೆ ಶೌಚಾಲಯ, ಲಿಫ್ಟ್ ಭದ್ರತಾ ಸಿಬ್ಬಂದಿಯ ಸೌಲಭ್ಯ ಇರಲಿದೆ. 1, 2 ಮತ್ತು 3ನೇ ಮಹಡಿಯಲ್ಲಿ ತಲಾ 43 ಕಾರುಗಳ ಪಾರ್ಕಿಂಗ್ ಮಾಡುವುದಕ್ಕೆ ಸ್ಥಳಾವಕಾಶ ಇರಲಿದೆ.