ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನಲ್ಲಿಯೇ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆಯಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ ಕುರಿತು ಕೇಂದ್ರ ಕ್ರೀಡಾ ಇಲಾಖೆ ಅನುಮತಿ ನೀಡಿದೆ. ಇದಕ್ಕಾಗಿ 73.80 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 50-50 ಮಾದರಿಯಲ್ಲಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ 36.50 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 36.90 ಕೋಟಿ ರೂ. ಅನುದಾನ ನೀಡಲಿದೆ ಎಂದರು.
ಕ್ರೀಡಾ ಅಕಾಡೆಮಿ ಸ್ಥಾಪನೆಯಿಂದ ಮಲೆನಾಡಿನ ಕ್ರೀಡಾ ಪ್ರತಿಭೆಗಳಿಗೆ ಸಹಾಯಕವಾಗಲಿದೆ. ಗ್ರಾಮೀಣ ಭಾಗದಿಂದ ಸಹ್ಯಾದ್ರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇದರ ಬಳಕೆಯನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಕ್ರೀಡಾ ಅಕಾಡೆಮಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸದೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
'ಯಡಿಯೂರಪ್ಪ ಸಂತೋಷದಿಂದ ಅಧಿಕಾರ ಬಿಟ್ಟಿದ್ದಾರೆ'
ಬಿ.ಎಸ್ ಯಡಿಯೂರಪ್ಪನವರು ಖುಷಿಯಿಂದಲೇ ಸಿಎಂ ಸ್ಥಾನವನ್ನು ಬಿಟ್ಟಿದ್ದಾರೆ. ಅವರು ಅಂದು ಕಣ್ಣೀರು ಹಾಕಿದ್ದು ಆನಂದದಿಂದ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ನಮ್ಮ ತಂದೆಗೆ ಪಕ್ಷ ಎಲ್ಲವನ್ನೂ ನೀಡಿದೆ. ಯುವಕರಿಗೆ ಆದ್ಯತೆ ನೀಡಬೇಕೆಂಬ ದೃಷ್ಟಿಯಿಂದ ಬಸವರಾಜ ಬೊಮ್ಮಯಿಯವರನ್ನು ಸಿಎಂ ಮಾಡಲಾಗಿದೆ. ಸಿಎಂ ಉತ್ತಮ ಸಚಿವ ಸಂಪುಟ ರಚನೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ಬರುವ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.