ಶಿವಮೊಗ್ಗ: ಉತ್ತರ ಕರ್ನಾಟಕ ಮತ್ತು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಉಂಟಾದ ಹಿನ್ನೆಲೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದರ ಪರಿಣಾಮ ಕರ್ನಾಟಕದ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ.
ಪ್ರವಾಹ ಬರುವ ಮುನ್ನ ಈರುಳ್ಳಿ ಬೆಲೆ ಕೆಜಿಗೆ 15 ರೂ. ಇತ್ತು. ಆದ್ರೀಗ 30ರಿಂದ 40 ರೂ.ಗೆ ಏರಿದೆ. ನಾವು ಮಹಾರಾಷ್ಟ್ರದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಅಲ್ಲದೇ ಇಲ್ಲಿ ಬೆಳೆದ ಈರುಳ್ಳಿಯನ್ನು ಸಹ ಮಾರಾಟ ಮಾಡುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಮಳೆಯಿಂದ ರಸ್ತೆಗಳಿಗೆ ಹಾನಿಯಾಗಿದ್ದು, ಇದು ಪೂರೈಕೆ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಿ ಸುಬ್ರಮಣಿ ಎಂಬುವರು ಹೇಳುತ್ತಾರೆ.
ಪುಣೆಯಿಂದ ಬರುವಂತಹ ಟ್ರಕ್ಗಳು ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿವೆ. ಹಾಗಾಗಿ ತಾಜಾ ಸರಕುಗಳಿಗಾಗಿ ಮಾರಾಟಗಾರರು ಕಾಯುತ್ತಿದ್ದಾರೆ. ಅಲ್ಲದೇ ದೊಡ್ಡ ವ್ಯಾಪಾರಸ್ಥ ಸಂಸ್ಥೆಗಳಾದ ಪುಣೆಯ ಮೌರ್ಯ ಎಕ್ಸ್ಪೊರ್ಟ್, ಬಿಎಲ್ಎಸ್ ಮೂರ್ತಿ ಮತ್ತು ಬೆಂಗಳೂರಿನ ನಾಗಪ್ಪ ಚೆಟ್ಟಿ ಸಂಸ್ಥೆಗಳು ಕೂಡ ಭಯದಲ್ಲಿವೆ.
ಈರುಳ್ಳಿಯ ಬೆಲೆ ಈ ರೀತಿ ಏರುತ್ತಿದ್ದರೆ ಸಾಮಾನ್ಯ ಜನರು ಮನೆ ನಡೆಸಲು ಕಷ್ಟವಾಗುತ್ತೆ. ಈಗಾಗಲೇ ಬೆಲೆ 40 ರೂ.ಗೆ ಏರಿದೆ. ಇದು ಹೀಗೆಯೇ ಮುಂದುವರೆದ್ರೆ ಜನರಿಗೆ ಹೊರೆಯಾಗಲಿದೆ ಎಂದು ಗೃಹಿಣಿ ರಾಂಚಿತ ಹೇಳಿದ್ದಾರೆ. ಅಲ್ಲದೇ ಹಬ್ಬದ ಸಮಯದಲ್ಲಿ ಈರುಳ್ಳಿ ಬೆಲೆ 60 ರೂ. ಆಗಬಹುದೆಂದು ವ್ಯಾಪರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.