ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ವಿಠಲಗೊಂಡನಕೊಪ್ಪ ಗ್ರಾಮದಲ್ಲಿ ಮುಸಿಯ (ಮಂಗ ಜಾತಿಗೆ ಸೇರಿದ ಪ್ರಭೇದ) ಉಪಟಳದಿಂದ ಜನರು ಬೇಸತ್ತು ಹೋಗಿದ್ದು, ಗ್ರಾಮದ ರಸ್ತೆಗಳಲ್ಲಿ ಕಾರುಗಳು ಚಲಿಸದಂತೆ ಮಾಡುತ್ತಿದೆ. ಗ್ರಾಮಕ್ಕೆ ಕಾರುಗಳು ಬಂದರೆ ಸಾಕು ದಾಳಿಗೆ ಮುಂದಾಗುವ ಮುಸಿಯ ಕಾರಿನ ಒಳಗಿರುವವರನ್ನು ಕಚ್ಚಿ ಗಾಯಗೊಳಿಸುತ್ತಿದೆ. ಹೀಗಾಗಿ ಗ್ರಾಮಸ್ಥರು ಮುಸಿಯನನ್ನು ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಗುರುವಾರ ನಾಗರಾಜ್ ಎಂಬವರು ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಮುಸಿಯ ಮತ್ತೆ ದಾಳಿ ಮಾಡಿ ಬಲಗೈಗೆ ಕಚ್ಚಿ ಗಾಯಗೊಳಿಸಿದೆ. ಕಳೆದ 6 ತಿಂಗಳಿನಿಂದ ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ನಡೆದುಕೊಂಡು ಹೋಗುವವರನ್ನು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮುಸಿಯ ಏನೂ ಮಾಡುವುದಿಲ್ಲ. ಆದರೆ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನದಲ್ಲಿ ಬರುವವರನ್ನು ಕಚ್ಚದೆ ಬಿಡುವುದಿಲ್ಲ. ಗುರುವಾರ ಸಂಜೆ ವಿಪರೀತ ಮಳೆ ಬಂದಾಗ ಕಾರಿನಲ್ಲಿ ಬಂದವರನ್ನು ಕೆಳಗಿಳಿಯಲೂ ಬಿಡದೆ ಒಂದು ಗಂಟೆಗೂ ಅಧಿಕ ಕಾಲ ಸತಾಯಿಸಿದೆ.
ಮುಸಿಯ ಕಾಟದ ಬಗ್ಗೆ ಈಟಿವಿ ಭಾರತದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಗ್ರಾಮಸ್ಥ ಗಿರೀಶ್, ಕಳೆದ 6 ತಿಂಗಳಿನಿಂದ ಮುಸಿಯ ಕಾಟ ಪ್ರಾರಂಭವಾಗಿದೆ. ನಮ್ಮ ಗ್ರಾಮವು ರಾಮನಗರ ಗ್ರಾಮ ಪಂಚಾಯಿತಿಗೆ ಸೇರ್ಪಡೆಯಾಗಿದ್ದು, ಇಲ್ಲಿನ ಪಿಡಿಒಗೆ ದೂರು ನೀಡಿದ್ದರೂ, ಅವರು ಯಾವುದೇ ಕ್ರಮ ತಗೆದುಕೊಂಡಿಲ್ಲ. ಈ ಭಾಗದ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟರೆ, ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ತಿಳಿಸಿದ್ದಾರೆ ಎಂದರು.
ನಮಗೆ ಮುಸಿಯನ ಕಾಟ ತಪ್ಪಿಸಿ ನೆಮ್ಮದಿಯಿಂದ ಓಡಾಟ ಮಾಡಲು ಅವಕಾಶ ಮಾಡಿಕೊಡಬೇಕು. ನಾವು ನಮ್ಮ ಕೆಲಸಗಳಿಗೆ ಹೋಗಲು ಆಗದೇ ಇರುವ ಸ್ಥಿತಿ ಬಂದಿದೆ. ಇದರಿಂದ ಕಚ್ಚಿಸಿಕೊಂಡರೆ, ಒಂದು ಇಂಜೆಕ್ಷನ್ಗೆ ಸಾವಿರಾರು ರೂ. ಬೇಕಾಗುತ್ತದೆ. ಹೀಗಾಗಿ ಮುಸಿಯ ಕಾಟದಿಂದ ತಪ್ಪಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: 30 ಕಿಲೋ ಮೀಟರ್ ದೂರ ಬಸ್ನಲ್ಲಿ ಪ್ರಯಾಣಿಸಿದ ಕೋತಿ- ವಿಡಿಯೋ