ಶಿವಮೊಗ್ಗ: ಸೀಲ್ಡೌನ್ನಿಂದ ಬಂದ್ ಆಗಿದ್ದ ಸೊರಬದ ಮುಖ್ಯ ರಸ್ತೆಯನ್ನು ತೆರವು ಮಾಡುವಂತೆ ಶಾಸಕ ಕುಮಾರ ಬಂಗಾರಪ್ಪ ತಹಶೀಲ್ದಾರ್ಗೆ ಸೂಚಿಸಿದರು. ಇಂದು ಸೊರಬದ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಸೂಚಿಸಿದರು.
ಸೊರಬ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಗುತ್ತಿಗೆದಾರನಿಗೆ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದರಿಂದ ಮುಖ್ಯ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಸೊರಬ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೀಲ್‌ಡೌನ್ ಆದ ಪ್ರದೇಶಗಳ ಜನತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ತಾಲೂಕು ಆಡಳಿತದ ಮೇಲಿದೆ ಎಂದು ಅವರು ಹೇಳಿದರು.
ಮುಖ್ಯರಸ್ತೆಯಲ್ಲಿ ವ್ಯಾಪಾರ-ವಹಿವಾಟಿನಲ್ಲಿ ಜೀವನ ಸಾಗಿಸಬೇಕಿರುವ ವರ್ತಕರು, ಹೋಟೆಲ್ ಉದ್ಯಮಿಗಳು ಹಾಗೂ ಜವಳಿ ವ್ಯಾಪಾರಿಗಳು ಸೇರಿದಂತೆ ನಿವಾಸಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಒದಗಿಸಲಾಗುವುದು ಎಂದರು.
ವರ್ತಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆಯುತ್ತಿದ್ದು, ಶ್ರೀರಂಗನಾಥ ದೇವಸ್ಥಾನ ಪಕ್ಕದ ಕಲ್ಯಾಣ ಮಂದಿರದ ಮುಂದುವರೆದ ಅಭಿವೃದ್ಧಿ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು ಪಟ್ಟಣದ ಸುತ್ತಲಿನ ಕೆರೆಗಳನ್ನು ಗುರುತಿಸಲಾಗಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಇದಕ್ಕೂ ಮೊದಲು ಹೋಟೆಲ್ ವರ್ತಕರ ಸಂಘದ ಕಾಳಿಂಗರಾಜ್, ಹರ್ಷ ಇತರರು ಮುಖ್ಯರಸ್ತೆಯ ಸಮಸ್ಯೆಗಳ ಕುರಿತು ಶಾಸಕ ಗಮನಕ್ಕೆ ತಂದರು. ಸಭೆಯಲ್ಲಿ ತಹಶೀಲ್ದಾರ್ ನಫೀಸಾ ಬೇಗಂ, ಪ.ಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಪ.ಪಂ ಸದಸ್ಯರಾದ ಎಂ.ಡಿ. ಉಮೇಶ್, ಮಧುರಾಯ್ ಜಿ. ಶೇಟ್, ಯು. ನಟರಾಜ್, ಸೀಲ್‌ಡೌನ್ ಪ್ರದೇಶದ ವ್ಯಾಪ್ತಿಯ ಮುಖ್ಯ ರಸ್ತೆಯ ವರ್ತಕರು, ದಿನಸಿ ವ್ಯಾಪಾರಿಗಳು, ಜವಳಿ ವ್ಯಾಪಾರಸ್ಥರು, ಹೊಟೇಲ್ ಉದ್ಯಮಿಗಳು, ಬೇಕರಿ ವರ್ತಕರು, ಮೊಬೈಲ್, ಎಲೆಕ್ಟ್ರಿಲ್ ವಸ್ತುಗಳ ಮಾರಾಟಗಾರರು ಹಾಗೂ ನಿವಾಸಿಗಳು ಇದ್ದರು.
ಇನ್ನು ಸೀಲ್ ಡೌನ್ ಪ್ರದೇಶದ ನಿವಾಸಿಗಳ ಸಭೆ ನಡೆಸಿದ್ದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.