ಶಿವಮೊಗ್ಗ: ಕಾವೇರಿ ಹೋರಾಟ ದಿನೇ ದಿನೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯ, ಕಾವೇರಿ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೆ ಇರುವ ಪರಿಣಾಮ ಸುಪ್ರೀಂ ಕೋರ್ಟ್ನಲ್ಲಿಯೂ ಸಹ ನ್ಯಾಯ ಸಿಗದಿರುವ ಸಂದರ್ಭ ಸೃಷ್ಟಿಯಾಗಿದೆ ಎಂದು ಶಿಕಾರಿಪುರ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ರಾಘವೇಂದ್ರ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಿಯವರೆಗೂ ರಾಜ್ಯ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಎಂದರೆ ಕಾವೇರಿ ಕಣಿವೆಯ ಹೋರಾಟದ ಸಂಘಟನೆಯವರು ಸಹ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಇದರ ನಡುವೆಯೂ ಸುಪ್ರೀಂ ಕೋರ್ಟ್ನಲ್ಲಿ ನಮಗೆ ಹಿನ್ನಡೆಯಾಗಿರುವುದು ಕಾವೇರಿ ಕಣಿವೆ ರೈತರಿಗೆ ದೊಡ್ಡ ಆಘಾತವಾಗಿದೆ. ಇವತ್ತು ಬೆಂಗಳೂರಿನಲ್ಲಿ ಬಿಜೆಪಿಯೂ ಸಹ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಂಡಿದೆ. ನ್ಯಾಯ ಸಿಗುವವರೆಗೂ ನಾವು ಹೋರಾಟವನ್ನು ನಡೆಸುತ್ತೇವೆ. ಒಂದು ಕಡೆ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ಮಂಡ್ಯದಲ್ಲಿಯೂ ಹೋರಾಟ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಕಡೆ ಹೋರಾಟಗಳು ನಡೆಯುತ್ತಿವೆ.
ಆದರೆ ರಾಜ್ಯ ಸರ್ಕಾರ, ಮಂತ್ರಿಗಳು ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳದೇ ಐದು ಉಪಮುಖ್ಯಮಂತ್ರಿಗಳಾಗಬೇಕು, ಆರು ಉಪಮುಖ್ಯಮಂತ್ರಿಗಳಾಬೇಕು ಎನ್ನುವುದರಲ್ಲೇ ಹೆಚ್ಚು ತಲೆಕೆಡಿಸಿಕೊಂಡಿದೆಯೇ ಹೊರತು, ಕಾವೇರಿ ವಿಚಾರದಲ್ಲಿ ನ್ಯಾಯ ಕೊಡಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಇಂದು ರಾಜ್ಯದ ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ಇನ್ನೂ ಹೆಚ್ಚು ತೊಂದರೆ ಕೊಡುತ್ತಿರುವ ಸರ್ಕಾರದ ನಡವಳಿಕೆ ಇದು ಅಕ್ಷಮ್ಯ ಅಪರಾಧ ಎಂದರು.
ಜೆಡಿಎಸ್ ಪಕ್ಷ ಎನ್ಡಿಎ ಸೇರಿರೋದು ಸ್ವಾಗತಾರ್ಹ: ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಬೇಕೆಂಬ ಕಸನನ್ನು ಇಟ್ಟುಕೊಂಡು ಹೊರಟಿದ್ದಾರೆ. ಈ ಕನಸನ್ನು ನನಸು ಮಾಡಲು ರಾಜ್ಯ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಪಕ್ಷ ಎನ್ಡಿಎ ಸೇರಿರೋದು ಸ್ವಾಗತಾರ್ಹ ಸಂಗತಿ. ಇದನ್ನು ಭಾರತೀಯ ಜನತಾ ಪಾರ್ಟಿಯ ಎಲ್ಲಾ ನಾಯಕರು ಸ್ವಾಗತ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕರು ತಮಿಳುನಾಡು ಏಜೆಂಟ್ರಂತೆ ವರ್ತಿಸುತ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ
ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ - ಡಿಕೆಶಿ: ಮತ್ತೊಂದೆಡೆ, ರಾಜ್ಯದ ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದು ತಿಳಿಸಿದರು.