ಶಿವಮೊಗ್ಗ : ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ರಾಜಕಾರಣಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ಶಾಂತಿಯುತವಾಗಿ ವಿದ್ಯಾಭ್ಯಾಸ ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಸಚಿವ ಈಶ್ವರಪ್ಪನವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಕೇಸರಿ ಬಾವುಟ ಹಾರಿಸಬೇಕೆಂದು ಎಲ್ಲೋ ಹೇಳಿದ್ದಾರಷ್ಟೇ.. ಇವರೇನು ಕೇಸರಿ ಬಾವುಟ ಹಿಡಿದು ಹೋಗಿದ್ದಾರಾ, ಈಶ್ವರಪ್ಪರವರು ಏಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ನವರಿಗೆ ಕೆಲಸವಿಲ್ಲ. ಅಭಿವೃದ್ಧಿ ಜೊತೆ ಕೈ ಜೋಡಿಸುತ್ತಿಲ್ಲ ಎಂದು ಗುಡುಗಿದರು.
ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದನ ಕಾಂಗ್ರೆಸ್ನವರಿಂದ ಹಾಳಾಗುತ್ತಿದೆ. ಅವರು ಬಜೆಟ್ ಬಗ್ಗೆ ಸಲಹೆ ಕೊಡಬಹುದಿತ್ತು.ಅಭಿವೃದ್ಧಿ ಬಗ್ಗೆ ಮಾತನಾಡಬಹುದಿತ್ತು.
ಆದರೆ, ಅದನ್ನು ಮಾಡುತ್ತಿಲ್ಲ, ಕಾಂಗ್ರೆಸ್ನವರಿಗೆ ಭಯದ ವಾತಾವರಣ ಇದೆ. ಎಲ್ಲಾ ಕಡೆ ನಮಗೆ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಅಹೋರಾತ್ರಿ ಧರಣಿ ಮಾಡುತ್ತಿಲ್ಲ.ಅರ್ಧ ರಾತ್ರಿ ಎದ್ದು ಮನೆಗೆ, ಹೋಟೆಲ್ಗೆ ಹೋಗಿ ಮಲಗಿ ಬೆಳಿಗ್ಗೆ ಎದ್ದು ರೆಡಿಯಾಗಿ ಬರುತ್ತಿದ್ದಾರೆ.ಅವರೆಲ್ಲಿ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.