ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿರುವ ಆಕ್ಸಿಜನ್ ಪ್ಲಾಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆಯ ಕುರಿತು ಮಾಹಿತಿ ಪಡೆಯಲು ಹಾಗೂ ಹೆಚ್ಚಿನ ಆಕ್ಸಿಜನ್ ಅವಶ್ಯಕತೆ ಬಿದ್ದಾಗ ತಕ್ಷಣ ಪೂರೈಕೆ ಮಾಡುವ ಬಗೆಗಿನ ಸಾಧ್ಯತೆಗಳನ್ನು ಅಧಿಕಾರಿಗಳ ಬಳಿ ಸಚಿವರು ಚರ್ಚಿಸಿದರು. ವಿಐಎಸ್ಎಲ್ ಕಾರ್ಖಾನೆಯು ಸೇಲ್ ವ್ಯಾಪ್ತಿಗೆ ಒಳಪಡುವುದರಿಂದ ಅವಶ್ಯಕತೆ ಬಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ಯಾರಿಗೂ ಆಕ್ಸಿಜನ್ ಸಿಕ್ಕಿಲ್ಲ ಎಂದಾಗಬಾರದು. ಈ ಉದ್ದೇಶದಿಂದ ಭೇಟಿ ನೀಡಿರುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸದಸ್ಯ ಕೆ.ಈ.ಕಾಂತೇಶ್ ಮತ್ತಿತರರು ಹಾಜರಿದ್ದರು.