ಶಿವಮೊಗ್ಗ: ಕೋವಿಡ್ ಮೂರನೇ ಅಲೆಯಲ್ಲ, ಮೂವತ್ತನೇ ಅಲೆ ಬಂದರೂ ಕೂಡ ನಾವು ಹೆದರುವುದಿಲ್ಲ. ಅಷ್ಟೊಂದು ಔಷಧ ಹಾಗೂ ಸಲಕರಣೆಗಳ ವ್ಯವಸ್ಥೆಯಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅನಿವಾಸಿ ಭಾರತೀಯ ಭೂಪಾಳಂ ಕುಟುಂಬದವರು ರೋಟರಿ ಮೂಲಕ ನೀಡಿರುವ ಕೋವಿಡ್ ನಿಯಂತ್ರಣದ ರಾಷ್ಟ್ರೀಯ ಕೊಡುಗೆ 5 ಕೋಟಿ ರೂ. ಮೌಲ್ಯದ ಸಲಕರಣೆಗಳ ಹಸ್ತಾಂತರ ಕಾರ್ಯಕ್ರಮವನ್ನ ಮೆಗ್ಗಾನ್ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿರಿ: ಹೋರಾಟ ಮಾಡುವವರು ಮಾಡಲಿ, ವೀರಶೈವ ಲಿಂಗಾಯತ ಒಂದೇ: ಎಂಬಿ ಪಾಟೀಲ್ಗೆ ಶಾಮನೂರು ತಿರುಗೇಟು
ಮಾನವೀಯ ಸ್ಪಂದನೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸಲಕರಣೆಗಳು ಬಂದಿವೆ. ಅದರಲ್ಲಿ ವೆಂಟಿಲೇಟರ್, ಆಕ್ಸಿಜನ್, ಕನ್ಸಟ್ರೇಟರ್ ಮೊದಲಾವು ಸೇರಿವೆ. ಈ ಸ್ಪಂದನೆಯಿಂದಾಗಿಯೇ ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಮೊದಲಿನಿಂದಲೂ ಭೂಪಾಳಂ ಕುಟುಂಬ ಕೊಡುಗೆ ಹಾಗೂ ದಾನದಲ್ಲಿ ಮುಂದಿದೆ. ಈಗಲೂ ಆ ಕುಟುಂಬದವರು ಅದನ್ನು ಉಳಿಸಿಕೊಂಡಿದ್ದಾರೆ. ಅವರ ಆಶ್ರಯದಲ್ಲಿಯೇ ಅನೇಕರು ನೆರವು ಪಡೆದಿದ್ದಾರೆ ಎಂದರು.
ಸಮಾರಂಭದಲ್ಲಿ ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಡಿಎಸ್ ಡಾ. ಸಿದ್ಧನಗೌಡ, ಎಂ.ಎಸ್. ಡಾ. ಶ್ರೀಧರ್, ಸಿಎಓ ಶಿವಕುಮಾರ್, ಆರ್ಎಸ್ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ, ಭೂಪಾಳಂ ಕುಟುಂಬದ ನಾಗಾರ್ಜುನ, ಕಿಶೋರ್ ಶೀರ್ನಾಳಿ, ಎಂ.ಜಿ.ರಾಮಚಂದ್ರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.