ಶಿವಮೊಗ್ಗ: ಮೈಸೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಆಯುಕ್ತೆ ನಡುವೆ ಗೊಂದಲವಿದೆ. ಇಬ್ಬರ ನಡುವಿನ ಜಗಳ ಬೀದಿಗೆ ಬಂದಿರುವುದನ್ನು ನಮ್ಮ ಸರ್ಕಾರ ಸಹಿಸಲ್ಲ. ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತೇವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇಬ್ಬರ ನಡುವಿನ ಗೊಂದಲದ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಅಧಿಕಾರಿಗಳು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ರೋಹಿಣಿ ಸಿಂಧೂರಿ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿಲ್ಲ. ಶಿಲ್ಪಾನಾಗ್ ಮೊನ್ನೆ ತನಕ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಕೇರಳದ ಗ್ರಾಮ ಪಂಚಾಯತ್ಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ನಾವು ಹೋಗಿದ್ದೆವು. ಆ ವೇಳೆ ಶಿಲ್ಪಾನಾಗ್ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಮೈಸೂರಿನ ಗೊಂದಲ ಏನೂ ಅಂತ ನನಗೆ ಗೊತ್ತಿಲ್ಲ. ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸುವಂತಹ ಸಮಸ್ಯೆ ಏನೂ ಎಂಬುವುದು ಗೊತ್ತಿಲ್ಲ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೋಗಿ ಬಂದಿದ್ದಾರೆ. ಸಿಎಂ ಅಥವಾ ಸಚಿವ ಸಂಪುಟದಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ತಿಳಿಸಿದರು.
ಓದಿ : ಡಿಸಿ ರೋಹಿಣಿ ಸಿಂಧೂರಿ ಆರೋಪಕ್ಕೆ 127 ಪುಟಗಳ ದಾಖಲೆ ಸಮೇತ ಉತ್ತರ ನೀಡಿದ ಮೈಸೂರು ಪಾಲಿಕೆ
ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದರು, ಎಲ್ಲಾ ಪಕ್ಷಗಳ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಆರೋಪ ಮಾಡುತ್ತಿದ್ದಾರೆ. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಹಮತವಿದೆ. ಕೋವಿಡ್ ನಿರ್ವಹಣೆಗೆ ಸಬಂಧಪಟ್ಟಂತೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ನಡುವೆ ಯಾವುದೇ ಗೊಂದಲವಿಲ್ಲ ಎಂದರು.