ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಇಂದು ಜಿಲ್ಲಾ ಪಂಚಾಯಿತಿಯ ಕೆಡಿಪಿಯ ತ್ರೈಮಾಸಿಕ ಸಭೆ ನಡೆಯಿತು.
ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಂಗಣದಲ್ಲಿ ಸಚಿವ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ, ಪ್ರಗತಿ ಹಾಗೂ ಕುಂಠಿತವಾಗಿರುವ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಚರ್ಚೆಗಳು ಬಂದಾಗ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಚಿವರು ಅಸಮಾಧಾನ ಹೊರ ಹಾಕಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಅಧಿಕಾರಿಗಳು ಹೊರ ಗುತ್ತಿಗೆದಾರನ ವಿರುದ್ಧ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಬಂದಾಗ ಕೇಸ್ ದಾಖಲಿಸದೆ ಸತಾಯಿಸಿ ಕೊನೆಗೆ ಕ್ರಿಮಿನಲ್ ಕೇಸ್ ದಾಖಲಿಸಿಲ್ಲ. ಇಲಾಖೆಯವರು ಜನರ ರಕ್ಷಣೆ ನೀಡುವ ಬದಲು ಏನ್ ಮಾಡ್ತಾ ಇದ್ದೀರಾ? ನಿಮ್ಮಲ್ಲಿ ದೂರು ನೀಡಲು ಬಂದವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕೇಸ್ ದಾಖಲಿಸಲು ನಿರಾಕರಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಓದಿ: ಕೆಡಿಪಿ ಸಭೆಯಲ್ಲಿ ಶಾಸಕ ಸಂಗಮೇಶರನ್ನು ಕಿಚಾಯಿಸಿದ ಸಚಿವ ಈಶ್ವರಪ್ಪ
ಪೊಲೀಸ್ ಇಲಾಖೆ ಎಲ್ಲಾ ವರ್ಗದವರಿಗೂ ಸಹಕಾರಿಯಾಗಿರಬೇಕು. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ನೆರವಿಗೆ ನಿಲ್ಲಬೇಕಿದೆ. ಅಲ್ಲದೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಇನ್ನೂ ಜೀವಂತವಾಗಿದೆ. ಅಲ್ಲೊಂದು, ಇಲ್ಲೊಂದು ಕೇಸ್ ಮಾಡಿ ಪ್ರಚಾರ ಪಡೆಯುತ್ತೀರಾ. ಮುಂದಿನ ಸಭೆಯಷ್ಟರಲ್ಲಿ ಗಾಂಜಾವನ್ನು ಜಿಲ್ಲೆಯಲ್ಲಿ ಇಲ್ಲದಂತೆ ಮಾಡಬೇಕು ಎಂದು ತಾಕೀತು ಮಾಡಿದರು. ಈ ವೇಳೆ ಎಸ್ಪಿ ಶಾಂತರಾಜ್ ಈ ಕುರಿತು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳು, ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.