ಶಿವಮೊಗ್ಗ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ಹೆಚ್‌ಡಿಕೆ ನೇತೃತ್ವದ ಮೈತ್ರಿ ಸರ್ಕಾರದ ಏತ ನೀರಾವರಿ ಯೋಜನೆಗಳನ್ನು ತಮ್ಮದೇ ಸಾಧನೆ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರದ ಮಗುವಿಗೆ ಸಿಎಂ ಬಿ ಎಸ್ ಯಡಿಯೂರಪ್ಪನವರು ತಂದೆಯಾಗಲು ಹೊರಟಿದ್ದಾರೆ ಎಂದು ಶಿಕಾರಿಪುರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಯೂರ್ ದರ್ಶನ್ ಉಳ್ಳಿ ವ್ಯಂಗವಾಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗೆ ಸಿಎಂ ಯಡಿಯೂರಪ್ಪನವರ ಕೊಡುಗೆ ಶೂನ್ಯ. ಕಾಂಗ್ರೆಸ್ ಸರ್ಕಾರ ಹಾಗೂ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ನೀಡಿದ ಏತ ನೀರಾವರಿ ಯೋಜನೆ ಹಾಗೂ ಶಿಕಾರಿಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ನಮ್ಮದೇ ಸಾಧನೆ ಎಂದು ಯಡಿಯೂರಪ್ಪನವರು ಬಿಂಬಿಸಿಕೊಳ್ಳು ಹೊರಟಿದ್ದಾರೆ. ಹಾಗಾಗಿ ಸೋಮವಾರ ನಡೆಯುವ ಏತ ನೀರಾವರಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿಗೆ ತಮ್ಮ ಸಾಧನೆ ಏನು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪನವರು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಸನ್ಯಾಸಿಕೊಪ್ಪ ಹಾಗೂ ಜಿ ಟಿ ಕಟ್ಟೆ ಏತ ನೀರಾವರಿ ಕಾಮಗಾರಿಯನ್ನು ಅನುಷ್ಠಾನಗೊಳಿಸಿದ್ದರು. ಆದರೆ, ಆ ಯೋಜನೆಗೆ ನೀರು ಬರದೆ ವಿಫಲವಾಗಿ ಕೇವಲ ಕಮಿಷನ್ ಕಾಮಗಾರಿಯಾಗಿದೆ ಎಂದು ಆರೋಪಿಸಿದರು. ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಅವರು ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯದಿಂದ ತಾಲೂಕಿನ ಬಹು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಘೋಷಿಸಬೇಕು. ಬಗರ್‌ಹುಕುಂ ಹೋರಾಟದ ಹೆಸರಿನಲ್ಲಿ ಅಧಿಕಾರ ಹಿಡಿದ ಮುಖ್ಯಮಂತ್ರಿಗಳು ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಈಗಲಾದರೂ ಸಾಗುವಳಿದಾರರಿಗೆ ಬಗರ್‌ಹುಕುಂ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಶಿಕಾರಿಪುರ ತಾಲೂಕಿನ ಸಂಡ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿ ಖಾಲಿ ಇದೆ. ಈ ಸ್ಥಳದಲ್ಲಿ ಕೈಗಾರಿಕಾ ಸ್ಥಾಪನೆಗೆ ಒತ್ತು ನೀಡಿ ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಕಳೆದ ಹತ್ತು ತಿಂಗಳಿಂದ ಅಂತ್ಯ ಸಂಸ್ಕಾರ ಯೋಜನೆಯಡಿ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಹಣ ಬೀಡುಗಡೆಗೊಳಿಸಬೇಕು, ಇಲ್ಲವಾದರೆ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮದಲ್ಲಿ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.