ಶಿವಮೊಗ್ಗ: ರಾಜ್ಯದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಸಿಎಂ ಉದ್ಭವ್ ಠಾಕ್ರೆ ಹೇಳಿಕೆಯನ್ನು ಶಿವಮೊಗ್ಗದ ಕ್ಷತ್ರಿಯ ಮರಾಠ ಕ್ಷೇಮಾಭಿವೃದ್ಧಿ ಸಂಘ ಖಂಡಿಸಿದೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ತಾನಾಜಿ, ಕನ್ನಡಿಗ ಮರಾಠಿಗರಾದ ನಾವುಗಳು ಕನ್ನಡ ತಾಯಿಯ ಮಡಿಲಲ್ಲಿ ಜನಿಸಿದ್ದು, ನಮ್ಮ ನಿಷ್ಠೆ ಎಂದಿಗೂ ಕರ್ನಾಟಕಕ್ಕೆ ಮೀಸಲಾಗಿರುತ್ತದೆ. ಹೀಗಿರುವಾಗ ಮಹಾರಾಷ್ಟ್ರದ ಸಿಎಂ ಉದ್ಭವ್ ಠಾಕ್ರೆ ಬೆಳಗಾವಿಯ ಕೆಲವು ಎಂಇಎಸ್ನ ಹಿತಾಸಕ್ತಿಗಳನ್ನು ಮೆಚ್ಚಿಸಲು ಹೊರಟಿದೆ. ರಾಜ್ಯದ ಕೆಲವು ಸ್ಥಳಗಳನ್ನು ಆಕ್ರಮಿಸುವ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದು, ಇದು ಕನ್ನಡಿಗರಾದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: ಹೆಬ್ಬಾಳ್ಕರ್ ಕಾರ್ಖಾನೆಯ ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಳ ಮಾರಣಹೋಮ?
ರಾಜ್ಯದ ಭೂ ಭಾಗವನ್ನು ಆಕ್ರಮಿಸುವಂತಹ ದುಸ್ಸಾಹಸಕ್ಕೆ ಮುಂದಾದರೆ ಮರಾಠಿ ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ. ಕರ್ನಾಟಕದ ಕನ್ನಡಿಗ ಮರಾಠಿಗರು ಅವರ ಹೇಳಿಕೆಯನ್ನು ಉಗ್ರವಾಗಿ ವಿರೋಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡಿಗ ಮರಾಠಿಗರೇ ಮಹಾರಾಷ್ಟ್ರದ ಸಿಎಂ ಉದ್ಭವ್ ಠಾಕ್ರೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹಾಗಾಗಿ ತಕ್ಷಣವೇ ಈ ಹೇಳಿಕೆಯನ್ನು ಹಿಂಪಡೆದು, ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಡಾ. ತಾನಾಜಿ ಒತ್ತಾಯಿಸಿದ್ದಾರೆ.