ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆಯ ಇಲಾಖೆಯ ವತಿಯಿಂದ ಮಾವು-ಹಲಸು-ಮತ್ತು ಜೇನು ಸಾಕಾಣಿಕೆಯ ಕುರಿತು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಮಾವು-ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ಮಾರಾಟದ ಕನಿಷ್ಟ ಬೆಲೆಯ ಸದುಪಯೋಗವನ್ನು ಗ್ರಾಹಕರು ಪಡೆಯುವಂತಾಗಬೇಕು. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಸಂಸ್ಕರಣೆಯ ಸೌಲಭ್ಯ ನೀಡುವ ಕುರಿತು ಚರ್ಚಿಸುತ್ತೇನೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಇವುಗಳ ಸಹಯೋಗದಲ್ಲಿ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಮಾವು, ಹಲಸಿನ ಮೇಳ ಹಾಗೂ ಪ್ರದರ್ಶನ, ಮಾರಾಟ ನಡೆಯುತ್ತಿದೆ. ಇದರ ಜೊತೆಗೆ ಜೇನು ಮತ್ತು ಸಾವಯವ ತೋಟಗಾರಿಕೆಯ ವಿವಿಧ ವಸ್ತುಗಳ ಮೇಳವನ್ನು 7 ರಿಂದ 9ರ ವರೆಗೆ ನಡೆಸಲಾಗುತ್ತಿದೆ.
ಜಿಲ್ಲೆ ಸೇರಿದಂತೆ ಹೆಚ್ಚು ಮಾವು ಬೆಳೆಯುವ ಕೋಲಾರ, ರಾಮನಗರ ಚಿಕ್ಕಬಳ್ಳಾಪುರ ಹಾಗೂ ವಿವಿಧ ಕಡೆಯಿಂದ ಮಾವು ಬೆಳೆಗಾರರು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ರೈತರಿಗೆ ಪ್ರತ್ಯೇಕವಾದ ಮಳಿಗೆ ನೀಡಲಾಗಿದೆ. ರಸಪೂರಿ, ಕಸಿ ಮಾವು, ಅಲ್ಪೋಂಸೋ, ಬಾದಾಮಿ ಸೇರಿದಂತೆ 20 ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಮೇಳದಲ್ಲಿ ಹೆಚ್ಚಾಗಿ ಸಾವಯವ ಮಾವಿನ ಹಣ್ಣನ್ನು ಮಾರಾಟ ನಡೆಯುತ್ತಿರುವುದು ವಿಶೇಷ. ವಿವಿಧ ತಳಿಯ ಮಾವಿನ ಹಣ್ಣನ್ನು ಮೇಳಕ್ಕೆ ಬಂದ ಗ್ರಾಹಕರು ಜೋರಾಗಿಯೇ ಖರೀದಿ ಮಾಡುತ್ತಿದ್ದಾರೆ.
ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ರುದ್ರಾಕ್ಷಿ ಹಲಸು, ಚಂದ್ರ ಹಲಸು,ಅಂಬಲಿ ಹಲಸು ನೋಡುಗರ ಬಾಯಲ್ಲಿ ನೀರೂರಿಸುತ್ತಿದ್ದವು. ಇದರ ಜೊತೆಗೆ ಹಲಸಿನ ಹಣ್ಣಿನ ಸಸಿಗಳ ಮಾರಾಟವೂ ನಡೆಯುತ್ತಿದೆ.