ಶಿವಮೊಗ್ಗ : ಖಾಸಗಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಕೆರೆ ಏರಿ ಮೇಲೆ ಶಿವಮೊಗ್ಗದಿಂದ ಶಿಕಾರಿಪುರ ಕಡೆಗೆ ಹೊರಟಿದ್ದ ಶ್ರೀನಿವಾಸ ಖಾಸಗಿ ಬಸ್ಗೆ ಸಾಗರ ಕಡೆಯಿಂದ ಬರುತ್ತಿದ್ದ ಬೈಕ್ ನೇರವಾಗಿ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ರಂಜಿತ್ (22) ಹಾಗೂ ಅನಿಲ್ (20) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅನಿಲ್ ಶಿವಮೊಗ್ಗದ ಪುರಲೆ ಬಡಾವಣೆಯ ನಿವಾಸಿ. ರಂಜಿತ್ ಶಿವಮೊಗ್ಗ ತಾಲೂಕು ಇಂದಿರಾ ನಗರದ ನಿವಾಸಿ. ಇಬ್ಬರು ಹೊಸನಗರದ ಮಾರಿಕಾಂಬ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್ ಅನ್ನು ವೇಗವಾಗಿ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಬಸ್ಗೆ ಡಿಕ್ಕಿ ಹೊಡೆದು ಗಾಯಾಳುಗಳಾಗಿ ಇಬ್ಬರು ರಕ್ತದ ಮಡುವಿನಲ್ಲಿ ಒದ್ದಾಡುವಾಗ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದ್ರು ಸಹ ವಿಫಲವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಬಾಲಕನ ಶವ ಪತ್ತೆ (ಹುಬ್ಬಳ್ಳಿ): ಈಜಲು ಹೋಗಿ ನೀರು ಪಾಲಾಗಿದ್ದ ಬಾಲಕನ ಶವ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಮೊನ್ನೆಯಷ್ಟೇ ಹುಬ್ಬಳ್ಳಿ ಉಣಕಲ್ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ. ಮೂರು ದಿನಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಬಾಲಕನ ಮೃತದೇಹ ಪತ್ತೆ ಮಾಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಈಜಲು ಹೋಗಿ ಕಾಣೆಯಾಗಿದ್ದ 15 ವರ್ಷದ ವೆಂಕಟೇಶ, ಸ್ನೇಹಿತರೊಂದಿಗೆ ಕೆರೆಗೆ ಹೋದಾಗ ನೀರಿನಲ್ಲಿ ಮುಳುಗಿದ್ದ. ಈ ನಿಟ್ಟಿನಲ್ಲಿ ಮೂರು ದಿನಗಳಿಂದ ಬಾಲಕ ವೆಂಕಟೇಶ್ಗಾಗಿ ಹುಡುಕಾಡಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಇದೀಗ ಉಣಕಲ್ ಕೆರೆಯಲ್ಲಿ ಬಾಲಕನ ಶವ ಪತ್ತೆ ಮಾಡಿದ್ದು, ಮೃತ ಬಾಲಕ ಹುಬ್ಬಳ್ಳಿಯ ಇಂದಿರಾ ನಗರ ನಿವಾಸಿ ಎಂದು ತಿಳಿದುಬಂದಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತವೆಸಗಿ ಕಾರಿನಲ್ಲಿದ್ದ ದಂಪತಿ ಹಿಂಬಾಲಿಸಿದ್ದ ಇಬ್ಬರ ಬಂಧನ
ದೇವನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಖತರ್ನಾಕ್ ಕಳ್ಳರ ಬಂಧನ: ಬೆಂಗಳೂರು ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮದ ಅರುಣ್ ಕುಮಾರ್ (30), ತಮಿಳುನಾಡಿನ ಸೂಲಗಿರಿಯ ಶ್ರೀಧರ್ (23) ಎಂದು ಗುರುತಿಸಲಾಗಿದೆ.
ಇನ್ನು, ಬಂಧಿತರು ವಿವಿಧೆಡೆ ಬೈಕ್ಗಳ ಕಳ್ಳತನ ಮಾಡ್ತಿದ್ದು ದೇವನಹಳ್ಳಿಯಲ್ಲಿ ಎರಡು, ವಿದ್ಯಾರಣ್ಯಪುರ ಹಾಗೂ ಯಲಹಂಕದಲ್ಲಿ ಒಂದು, ತಮಿಳುನಾಡಿನ ಹೊಸೂರಿನ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳಿಂದ 6 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು, ಬಂಧಿತ ಅರುಣ್ ಕುಮಾರ್ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಸುಲಿಗೆ, ಡಕಾಯಿತಿ ಸೇರಿದಂತೆ 11 ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಈಶಾನ್ಯ ವಿಭಾಗದ ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಂಧಿತ ಇಬ್ಬರು ಬೈಕ್ ಕಳ್ಳತನ ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಹಿಟ್ ಆ್ಯಂಡ್ ರನ್ ಕೇಸ್- ಸಾವಿಗೀಡಾದ ಪಾದಚಾರಿಯ ಮಾಹಿತಿ ಪತ್ತೆ; ಆರೋಪಿಗಾಗಿ ಪೊಲೀಸರ ತಲಾಶ್