ಶಿವಮೊಗ್ಗ: ಶಿಕಾರಿಗೆ ತೆರಳಿದ್ದ ವೇಳೆ ಗುಂಡು ತಗುಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕು ನೂಣಬನೂರು ಗ್ರಾಮ ಪಂಚಾಯತ್ನ ಅಂಬುತೀರ್ಥ ಬಳಿ ನಡೆದಿದೆ. ಶನಿವಾರ ಬೆಳಗ್ಗೆಯೇ ಸುಮಾರು 15 ಜನರ ತಂಡವು ಕಾಡಿಗೆ ಬೇಟೆಗೆಂದು ತೆರಳಿದ್ದ ವೇಳೆ ದುರಂತ ಸಂಭವಿಸಿದೆ.
ಬೇಟೆಯಾಡುವ ವೇಳೆ ಗುಂಡು ತಗುಲಿ ನೂಣಬನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾಂತರಾಜು (34) ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗುಂಡೇಟಿನಿಂದ ಕಾಂತರಾಜು ಚೀರಾಡುತ್ತಿದ್ದಾಗ ರಸ್ತೆಯಲ್ಲಿ ತೆರಳುತ್ತಿದ್ದವರು ತೀರ್ಥಹಳ್ಳಿಯ ಜೆ.ಸಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಕಾಂತರಾಜು ಅವರೊಂದಿಗೆ ಬೇಟೆಗೆ ತೆರಳಿದ್ದವರಿಂದಲೇ ಗುಂಡು ಹಾರಿರುವ ಶಂಕೆ ದಟ್ಟವಾಗಿದ್ದು, ಆದರೆ ಯಾರು ಗುಂಡು ಹಾರಿಸಿದ್ದರೆಂಬುದು ತಿಳಿದುಬಂದಿಲ್ಲ.
ಮೃತನ ಜೊತೆ ಶಿಕಾರಿಗೆ ತೆರಳಿದ್ದವರೆಲ್ಲರೂ ಕೂಡ ಘಟನೆ ಬಳಿಕ ಪರಾರಿಯಾಗಿದ್ದಾರೆ. ಇಷ್ಟೊಂದು ಜನ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ತೆರಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಕರ್ತವ್ಯದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂತರಾಜು ನೂಣಬನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಐದು ವರ್ಷ ಕಾರ್ಯನಿರ್ವಹಿಸಿದ್ದರು. ಇವರು ಅವಿವಾಹಿತರಾಗಿದ್ದು, ವಯಸ್ಸಾದ ತಂದೆ ಹಾಗೂ ಓರ್ವ ಸಹೋದರನಿದ್ದಾನೆ. ಇಂದು ತೀರ್ಥಹಳ್ಳಿ ಕ್ಷೇತ್ರದಲ್ಲಿಯೇ ಇದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಜೆ.ಸಿ ಆಸ್ಪತ್ರೆಗೆ ತೆರಳಿ ಕಾಂತರಾಜು ಮೃತದೇಹ ದರ್ಶನ ಪಡೆದಿದ್ದಾರೆ. ಸದ್ಯ ಶವ ಪರೀಕ್ಷೆಗಾಗಿ ಮೃತದೇಹವನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ವರ್ಕೌಟ್ ಸಮಯದಲ್ಲೇ ಕುಸಿದು ಬಿದ್ದ ಮಹಿಳೆ.. ಕ್ಷಣಾರ್ಧದಲ್ಲೇ ಹಾರಿಹೋಯ್ತು ಪ್ರಾಣ! ವಿಡಿಯೋ