ಶಿವಮೊಗ್ಗ: ಷಹಜಹಾನ್ ಎಂದರೆ ನಮಗೆ ನೆನಪಾಗುವುದು ತಾಜ್ ಮಹಲ್. ತನ್ನ ಪ್ರೀತಿಯ ಪತ್ನಿಗಾಗಿ ಕಟ್ಟಿಸಿದ ಈ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ತಾಜ್ಮಹಲ್ಗೂ ಮುನ್ನವೇ ಕಟ್ಟಲಾಗಿರುವ ಪ್ರೇಮದ ಕಾಣಿಕೆಯೊಂದು ನಮ್ಮ ಕರ್ನಾಟಕದಲ್ಲಿ ಇದೆ ಎನ್ನಲಾಗಿದೆ.
- " class="align-text-top noRightClick twitterSection" data="">
ಪತ್ರಕರ್ತ ಎಸ್. ಶ್ಯಾಮ್ಪ್ರಸಾದ್ ಈ ವಿಚಾರನ್ನು ಸಾಕ್ಷ್ಯಾಧಾರದ ಮೂಲಕ ವಿಡಿಯೋ ರೂಪದಲ್ಲಿ ಹೊರ ತಂದಿದ್ದಾರೆ. ಅಷ್ಟೇ ಅಲ್ಲ ತಮ್ಮ 'ಎನಿಗ್ಮಾಸ್ ಆಫ್ ಕರ್ನಾಟಕ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಬರುವ ಹಲವಾರು ವಿಶೇಷ ಮಾಹಿತಿಗಳಲ್ಲಿ ಪ್ರಮುಖವಾಗಿ ರಹಸ್ಯ ಕಥೆಗಳ ಅನಾವರಣ ಈಗ ಯೂಟ್ಯೂಬ್ನಲ್ಲಿ ದೊರೆಯಲಿದೆ ಎಂದು ಶ್ಯಾಮ್ ಪ್ರಸಾದ್ ಹೇಳುತ್ತಾರೆ. ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಿಗೆ ಇದು ಹೇಳಿ ಮಾಡಿಸಿದ ವಿಚಾರ ಎನ್ನಬಹುದು.
ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ತಾಜ್ಮಹಲ್ಗೂ ಮುನ್ನ 50 ವರ್ಷಗಳ ಹಿಂದೆ ಕಟ್ಟಿಸಲಾದ ಪ್ರೀತಿಯ ಸಂಕೇತ ಇದೆ. ಕೆಳದಿ ಅರಸ ಹಿರಿಯ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿ ಚಂಪಕ ಸರಸಿ ಹೆಸರಿನಲ್ಲಿ ಸರೋವರವೊಂದನ್ನು ಕಟ್ಟಿಸಿದ್ದನು ಎನ್ನಲಾಗಿದೆ. ಸಂಪಿಗೆ ಮರಗಳು ಹೆಚ್ಚಾಗಿ ಇರುವ ಈ ಸ್ಥಳದಲ್ಲಿ ಸರೋವರವನ್ನು ಕಟ್ಟಿಸಿದ್ದರಿಂದ ಇದಕ್ಕೆ ಸಂಪಕ ಸರಸು ಎಂದು ಕೂಡಾ ಕರೆಯಲಾಗುತ್ತದೆ. 1592 ರ ಶಾಸನದಲ್ಲಿ ಚಂಪಕ ಸರಸಿ ಎಂಬ ಹೆಸರು ಉಲ್ಲೇಖವಾಗಿದೆ. ಸರಸು ಎಂದರೆ ಕೊಳ ಎಂಬ ಅರ್ಥ ಕೂಡಾ ಇದೆ.
ಹಿರಿಯ ವೆಂಕಟಪ್ಪ ನಾಯಕನ ಬಗ್ಗೆ ಇಟಲಿಯ ಯಾತ್ರಿಕನೊಬ್ಬ ಉಲ್ಲೇಖ ಮಾಡಿರುವ ವಿಚಾರಗಳನ್ನು ಕೂಡಾ ಶ್ಯಾಮ್ ಪ್ರಸಾದ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.