ಶಿವಮೊಗ್ಗ: ನಗರದ ಕೆಇಬಿ ವೃತ್ತದಲ್ಲಿ ವೇಗವಾಗಿ ಬಂದ ಮೆಕ್ಕೆಜೋಳ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಸೈಕಲ್ ಸರಿ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪಲ್ಟಿಯಾಗಿದೆ. ಸೈಕಲ್ ಸರಿ ಮಾಡುತ್ತಿದ್ದ ವ್ಯಕ್ತಿ ಲಾರಿಯ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೈಕಲ್ ಸವಾರ ಹಾಲು ಮಾರಲು ಬಂದಿದ್ದು, ಸೈಕಲ್ ಚೈನು ಕಳಚಿದರ ಪರಿಣಾಮ ಚೈನು ಸರಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಚಟ್ನಹಳ್ಳಿಯ ಅಜೇಯ (41) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಥಳೀಯರು ಲಾರಿ ಅಡಿಯಲ್ಲಿ ಸಿಲುಕಿದ್ದ ಸೈಕಲ್ ಸವಾರನನ್ನು ಹೊರ ತೆಗೆದಿದ್ದು ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಲಾರಿ ಚಾಲಕನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.