ಶಿವಮೊಗ್ಗ : ಜಿಲ್ಲೆಯಲ್ಲಿ ಮತ್ತೆ ಗಲಭೆಯಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಈ ವಿಚಾರ ಹೇಳಿದ್ದಕ್ಕೆ ಆಯನೂರು ಮಂಜುನಾಥ್ ಅವರಿಗೆ ಧನ್ಯವಾದ ಎಂದರು.
ಆಯನೂರು ಮಂಜುನಾಥ್ ಮತ್ತು ಮಾಜಿ ಸಚಿವ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ನೇರವಾಗಿ ಈಶ್ವರಪ್ಪ ಕಾರಣ. ಏಕೆಂದರೆ ರಾಜ್ಯಪಾಲರಿಗೆ ಅವರೇ ಹೋಗಿ ಪತ್ರ ಕೊಟ್ಟಿದ್ದು. ಮುಖ್ಯಮಂತ್ರಿಯಾಗಿ ಶಿವಮೊಗ್ಗಕ್ಕೆ ಯಡಿಯೂರಪ್ಪ ಬಂದಾಗ ಇಲ್ಲಿನ ಶಾಸಕರಾಗಿ ಅಗೌರವ ನೀಡಿದ್ದಾರೆ. ಇದೇ ಅವರ ರಾಜಕೀಯ ಸಾಧನೆ ಎಂದು ಈಶ್ವರಪ್ಪ ವಿರುದ್ದ ಕೆ.ಬಿ ಪ್ರಸನ್ನ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಸರ್ಕಾರದಲ್ಲಾದ ಕೆಲಸಗಳನ್ನು ಈಶ್ವರಪ್ಪ ಮುಂದುವರೆಸಿದ್ದಾರೆ. ಹೊಸದಾಗಿ ಅವರು ನಗರಕ್ಕೆ ಅಭಿವೃದ್ದಿ ಹೆಸರಿನಲ್ಲಿ ಏನೂ ಮಾಡಿಲ್ಲ ಎಂದು ಈಶ್ವರಪ್ಪ ವಿರುದ್ಧ ಹರಿಹಾಯ್ದರು. ಅಲ್ಲದೇ, ಹಿಂದೂ-ಮುಸ್ಲಿಂ ಗಲಾಟೆ, ಯುವಕರ ಬಲಿ, ಅಶಾಂತಿ ಸೃಷ್ಟಿಸಿ ಗೆಲ್ಲುತ್ತಾರೆ ಎಂದರು. ವಾರ್ಡ್‌ಗಳಲ್ಲಿ ಅಕ್ರಮ ಹಣ, ಗಲಾಟೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳು, ಚುನಾವಣೆಯಲ್ಲಿ ಅಕ್ರಮ ಹಣದ ಹರಿವಿನ ಬಗ್ಗೆ ಎಚ್ಚರ ವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ಆಯನೂರು ಕಾಂಗ್ರೆಸ್ಗೆ ಬಂದರೆ ಸ್ವಾಗತ: ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷಕ್ಕೆ ಬರುವ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಕೋರುತ್ತೇನೆ ಎಂದು ಕೆ.ಬಿ.ಪ್ರಸನ್ನ ಕುಮಾರ್ ಹೇಳಿದರು. ಅವರು ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ನನ್ನ ಅಭ್ಯಂತರವೇನೂ ಇಲ್ಲ. ಮುಂಚೇನು ಒಮ್ಮೆ ಬಂದು ಸಿದ್ದಾಂತ ಸರಿಯಾಗದೇ ಹಾಗೇ ಹೋಗಿದ್ದರು. ನಾನೂ ಕೂಡ ಆಕಾಂಕ್ಷಿ. ನನ್ನ ಜೊತೆ 11 ಮಂದಿ ಆಕಾಂಕ್ಷಿಗಳಿದ್ದೇವೆ. ಇದರ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಎಂದರು.
ಇನ್ನೂ ಓದಿ: 2ನೇ ಪಟ್ಟಿಯಲ್ಲೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಲಿಂಗಾಯತ ಕೈ ನಾಯಕರ ಒತ್ತಾಯ