ಶಿವಮೊಗ್ಗ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ರಾಗಿಗುಡ್ಡದಲ್ಲಿನ ವಾಸ್ತವ ಸ್ಥಿತಿ ಅರಿತು ಮಾತನಾಡಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಈ ಹಿಂದೆ ಗೃಹ ಸಚಿವರಾಗಿದ್ದ ರಾಮ-ಲಿಂಗ ದೇವರ ಹೆಸರು ಇಟ್ಟುಕೊಂಡವರು ರೆಡ್ಡಿಯವರು. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಗೊತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಉಸ್ತುವಾರಿ ಸಚಿವರು ಆ ಭಾಗಕ್ಕೆ ಹೋಗಿ ಬಂದಿದ್ದಾರೆ. ಅವರು ಬಿಜೆಪಿಯವರು ವೇಷ ಧರಿಸಿ ಗೂಂಡಾಗಿರಿ ಮಾಡಿದ್ದಾರೆ ಅಂದ್ರೆ ನಾನು ಕೇಳುತ್ತೇನೆ ಎಂದರು. ಕತ್ತಲಲ್ಲಿ ರಾಮಲಿಂಗಾರೆಡ್ಡಿ ಬಾಣ ಬಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತನ ರಕ್ತದ ಕಣಕಣ ಕೂಡ ನಾವು ಭಾರತ ಮಾತೆಯ ಮಕ್ಕಳೆನ್ನುತ್ತದೆ ಎಂದು ಹೇಳಿದರು.
ಈ ರೀತಿ ನೇರ ಸುಳ್ಳು ಹೇಳಿ ಜನರನ್ನು ಕೆರಳಿಸುವ ಪ್ರಯತ್ನ ಮಾಡ್ತಿದ್ದಾರೆ. ಸುಳ್ಳು ಮಾತು ನಂಬಬೇಡಿ ಅಂತ ಎಸ್ಪಿ ಹೇಳಿದ್ದಾರೆ. ಅಂಥವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ರಾಮಲಿಂಗಾರೆಡ್ಡಿ ಮೇಲೆ ಕ್ರಮ ಕೈಗೊಳ್ಳಲಿ ಎಂದರು. ಇಲ್ಲಾಂದ್ರೆ ರಾಮಲಿಂಗಾರೆಡ್ಡಿ ಬುದ್ಧಿಭ್ರಮಣೆ ಆಗಿತ್ತು, ತಪ್ಪಾಯ್ತು ಅಂತ ಹಿಂದುಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ರಾಗಿಗುಡ್ಡದಲ್ಲಿ ಪೂರ್ವನಿಯೋಜಿತ ಗಲಾಟೆ ಮಾಡಿದ್ದಾರೆ. ಇವರ ಬಳಿ ಬೇಹುಗಾರಿಕೆ ಸಂಸ್ಥೆ ಇಲ್ವಾ ಎಂದು ಪ್ರಶ್ನಿಸಿದರು. ಗಲಾಟೆ ಮಾಡಿದವರು ಜೈಲಲ್ಲಿದ್ದಾರೆ. ಅವರು ಖುದ್ದು ಜೈಲಿಗೆ ಹೋಗಿ ಬರಲಿ. ಯಾರು ಯಾರು ವೇಷ ಬದಲಿಸಿಕೊಂಡಿದ್ದಾರೆ ಗೊತ್ತಾಗುತ್ತೆ ಎಂದರು. ಗೃಹ ಸಚಿವರು ಇದು ಸಣ್ಣ ಘಟನೆ ಅಂತ ಹೇಳುತ್ತಾರೆ. ಮೆರವಣಿಗೆಯಲ್ಲಿ ರಟ್ಟಿನ ಖಡ್ಗವೂ ಇತ್ತು, ಒರಿಜಿನಲ್ ಕೂಡ ಇತ್ತು. ಗೃಹ ಸಚಿವರು ಯಾವ ರೀತಿ ನೋಡ್ತಾರೋ ಗೊತ್ತಿಲ್ಲ ಎಂದರು.
ಹುಬ್ಬಳ್ಳಿ, ಡಿಜಿ ಹಳ್ಳಿ, ಕೆಜಿ ಹಳ್ಳಿ ಗಲಭೆ ಪತ್ರ ವಿಚಾರ: ಹುಬ್ಬಳ್ಳಿ, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರಿದವರ ಬಿಡುಗಡೆಗೆ ಪತ್ರ ಬರೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ಕೂಡ ಜೈಲಲ್ಲಿ ಇದ್ದವರನ್ನು ಬಿಡಬೇಕು ಅಂತ ಪತ್ರ ಬರೆಯುತ್ತಾರೆ. ಇವರನ್ನು ತೆಗೆದುಹಾಕಿ ಪ್ರಾಮಾಣಿಕರನ್ನು ಡಿಸಿಎಂ ಮಾಡಲಿ ಎಂದರು. ಡಿ.ಕೆ.ಶಿವಕುಮಾರ್ ಅವರಂತಹ ಡಿಸಿಎಂ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಹೇಳಿದರು.
ಮೈತ್ರಿ ಕುರಿತು ಇಬ್ರಾಹಿಂ ಹೇಳಿಕೆ ವಿಚಾರ: ದೇವೇಗೌಡರು ಎನ್ಡಿಎ ಮೈತ್ರಿಕೂಟದಿಂದ ಹೊರ ಬರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರು, ಮೈತ್ರಿ ವಿಚಾರಕ್ಕೆ ದೆಹಲಿಗೆ ಇವರನ್ನು ಕರೆದುಕೊಂಡು ಹೋಗಿಲ್ಲ ಅನ್ನೋ ಅಸಮಾಧಾನ ಅವರಿಗಿದೆ. ದೇವೇಗೌಡರು ಮೋದಿಯವರ ನಾಯಕತ್ವದ ಮೇಲೆ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಆಗೋದು ಗ್ಯಾರಂಟಿ ಎಂದು ಹೇಳಿದರು.
ನಾಳೆ ಸತ್ಯಶೋಧನಾ ಸಮಿತಿ ರಾಗಿಗುಡ್ಡಕ್ಕೆ ಬರಲಿದೆ. ನಾನು ಕೂಡ ಆ ಸಮಿತಿಯಲ್ಲಿ ಇದ್ದೇನೆ. ನಮ್ಮ ತಂಡ ಮೆಗ್ಗಾನ್ ಆಸ್ಪೆತ್ರೆಗೂ ಭೇಟಿ ನೀಡಲಿದೆ. ಸಂತ್ರಸ್ತರಿಂದ ಅಹವಾಲು ಆಲಿಕೆ ಮಾಡಲಿದ್ದೇವೆ. ಆ ನಂತರ ಮಾಧ್ಯಮದರೊಂದಿಗೆ ಕಟೀಲ್ ಮಾತನಾಡಲಿದ್ದಾರೆ ಎಂದು ಹೇಳಿದರು.
ಎಸ್ಪಿಯವರ ದ್ವಂದ್ವ ಹೇಳಿಕೆ ವಿಚಾರ: ಎಸ್ಪಿ ಇರೋದ್ರಲ್ಲಿ ಪ್ರಾಮಾಣಿಕರಾಗಿದ್ದಾರೆ. ಅವರ ಮೇಲೆ ಸಾಕಷ್ಟು ಒತ್ತಡ ತಂದಿದ್ದಾರೆ. ಅವರಿಂದ ಏನೇನೋ ಹೇಳಿಕೆ ಹೇಳಿಸುತ್ತಿದ್ದಾರೆ. ಕಾಂಗ್ರೆಸ್ನವರು ಎಸ್ಪಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಎಲ್ಲಿದ್ದಾನೆ ಎಂಬುದೇ ಗೊತ್ತಿಲ್ಲ. ಅವರನ್ನು ಅರ್ಜೆಂಟಾಗಿ ಡಿಸ್ಚಾರ್ಜ್ ಮಾಡಿಸಿದ್ದಾರೆ. ಗಾಯಗೊಂಡ ಪೊಲೀಸ್ ಬಗ್ಗೆ ಮಾಹಿತಿ ಕೊಡುವುದಾಗಿ ಎಸ್ಪಿ ನಿನ್ನೆ ಹೇಳಿದ್ದರು. ಈವರೆಗೆ ಆ ಸಿಬ್ಬಂದಿ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದರು.
ಬೆಳಗಾವಿಯಲ್ಲಿ ಶೆಫರ್ಡ್ ಸಮಾವೇಶ ವಿಚಾರ : ಸಿದ್ದರಾಮಯ್ಯನವರ ಸನ್ಮಾನ ಕಾರ್ಯಕ್ರಮ ಮಾಡಿದ್ರೆ ನಾನ್ಯಾಕೆ ಹೋಗಲಿ?. ಅದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯ ಕುರುಬರ ಸಂಘ ಆಯೋಜನೆ ಮಾಡಿದ್ದಲ್ಲ. ಶೆಫರ್ಡ್ ಇಂಡಿಯಾ ಇಂಟರ್ನ್ಯಾಶನಲ್ ಸಂಸ್ಥೆ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರದಲ್ಲಿದ್ದವರು, ಅವರಿಗೆ ಸನ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಿ: ಬಿಜೆಪಿ ಒತ್ತಾಯ