ಶಿವಮೊಗ್ಗ: ರಾಜ್ಯ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಗಲಾದರೂ ಪ್ರಧಾನಿ ಮೋದಿ ಅವರು ಬಗೆಹರಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಶಿವಮೊಗ್ಗದಲ್ಲಿ ಒತ್ತಾಯಿಸಿದರು. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರೈತರ ಬೇಡಿಕೆಗಳೇನು?: 3 ವರ್ಷಗಳಿಂದ ಅತಿವೃಷ್ಟಿ, ಪ್ರವಾಹ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಕಾನೂನು ಜಾರಿ ಆಗಬೇಕು. ಕಬ್ಬಿನ ದರ ಟನ್‌ಗೆ 4,000 ರೂ ನಿಗದಿ ಮಾಡಬೇಕು ಹಾಗೂ ಕಳೆದ ಹಿಂದಿನ ಹೆಚ್ಚುವರಿ 150 ರೂ ಕಬ್ಬಿನ ಬಾಕಿ ಹಣ ಕೊಡಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ವಿಶ್ವ ರೈತ ದಿನವಾದ ಡಿ. 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹಣ ತೊಡಗಿಸಿದ್ದು, ಬರಗಾಲದಿಂದಾಗಿ ಬಿತ್ತಿದ ಬೆಳೆ ನಾಶವಾಗಿದೆ. ಕೈಗೆ ಬೆಳೆ ಬಾರದಿದ್ದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟ ನೆರವಿಗಾಗಿ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಂತೆ ಕೇಂದ್ರ ಸರ್ಕಾರ, ಅದೇ ರೀತಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆ ಕಳೆದ ವರ್ಷಕ್ಕಿಂತ ಶೇ.50ರಷ್ಟು ಕಡಿಮೆ ಇದ್ದು, ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿ ಮಾಡುತ್ತಿವೆ. ಆದರೆ ರೈತರಿಗೆ ಯೋಗ್ಯ ಬೆಲೆ ಘೋಷಣೆ ಮಾಡಿಲ್ಲ. ಕಬ್ಬಿನ ಬೆಳೆ ತೂಕದಲ್ಲೂ ರೈತರಿಗೆ ಮೋಸ ಆಗುತ್ತಿದ್ದು, ಸರ್ಕಾರ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಬೆಳೆ ನಾಶವಾಗಿ ರೈತರು ಸಂಕಷ್ಟದಲ್ಲಿದ್ದರೂ ಯಾವುದೇ ಪರಿಹಾರ ಕ್ರಮ ಸರಕಾರ ಕೈಗೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿವೆ. ಕೂಡಲೇ ಬರನಷ್ಟ ಪರಿಹಾರವನ್ನು ಎಕರೆಗೆ 25,000 ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಸಮಾವೇಶದಲ್ಲಿ ಒಕ್ಕೊರಲ ನಿರ್ಣಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂಓದಿ: ಬೆಳಗಾವಿ ಚೆನ್ನಮ್ಮ ವೃತ್ತದಿಂದ ರೈತರ ಪಾದಯಾತ್ರೆ ಆರಂಭ: ರೈತರಿಗೆ ಸಾಥ್ ಕೊಟ್ಟ ದರ್ಶನ್ ಪುಟ್ಟಣ್ಣಯ್ಯ