ಶಿವಮೊಗ್ಗ: ನನ್ನ ತಮ್ಮ ಹೀಗೆ ಸೋಲುತ್ತಲೇ ಇರಲಿ. ಜಿಲ್ಲೆಗೆ ಅನುದಾನ ತರುತ್ತಲೇ ಇರಲಿ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸಹೋದರ ಹಾಗೂ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಮಧು ಬಂಗಾರಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ತಾನು ಸೋತರು ಸಹ ಜಿಲ್ಲೆಗೆ ಅನುದಾನ ತಂದಿರುವೆ ಎಂದು ಹೇಳುತ್ತಿರುವ ಮಧು, ಈ ಚುನಾವಣೆಯಲ್ಲೂ ಸೋತು ಜಿಲ್ಲೆಗೆ ಅನುದಾನ ತರಲಿ ಎಂದು ಎದಿರೇಟು ಕೊಟ್ಟರು.
ಕುಮಾರಸ್ವಾಮಿ ಚುನಾವಣೆಯಲ್ಲಿ ಮೋಸ್ಟ್ ಡಿಸ್ಟರ್ಬ್ ಸಿಎಂ ಅಗಿದ್ದಾರೆ. ಅವರು ಅಧಿಕಾರವನ್ನು ಎಷ್ಟು ದುರುಯೋಗಪಡಿಸಿಕೊಂಡಿದ್ದಾರೆಂದರೆ ಚುನಾವಣಾ ಆಯೋಗ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿದೆ. ನನ್ನ ಮಗ ನಿಖಿಲ್ ಬಿಟ್ಟು ಬೇರೆ ಸುದ್ದಿನೇ ಇಲ್ವಾ ಅಂತ ಮಾಧ್ಯಮದವರನ್ನೇ ಕೇಳುತ್ತಿದ್ದಾರೆ. ಕರ್ನಾಟಕದ ಅರ್ಧ ಅನುದಾನವನ್ನು ಮಂಡ್ಯಕ್ಕೆ ಹಾಕಿದ್ದಾರೆ. ಇನ್ನು ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದನ್ನು ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿರವರಿಗೆ ಹೇಳಿಕೊಡುವ ಅವಶ್ಯಕತೆಯೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವಕ್ಕೂ ಬಂದಿದೆ. ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಾದ ಘಟನೆಗಳೇ ಇದಕ್ಕೆ ಉದಾಹರಣೆ ಎಂದು ವಾಗ್ದಾಳಿ ನಡೆಸಿದರು.
ಶಿವರಾಜ್ಕುಮಾರ್ ಹಾಗೂ ನನ್ನ ತಂಗಿ ಗೀತಾ ಅವರು ಕಳೆದ ಚುನಾವಣೆಯಲ್ಲಿ ಕಾಣೆಯಾದವರು ಈಗ ಪತ್ತೆಯಾಗಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಇಲ್ಲೇ ಮನೆ ಮಾಡುತ್ತೇನೆ ಅಂತ ಹೇಳಿದವರು ಮತ್ತೆ ಈಗ ಪ್ರತ್ಯಕ್ಷರಾಗಿದ್ದಾರೆ. ಶಿವಣ್ಣ ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಬರಲು ಕಾರಣವೇನು ಎಂದು ಪ್ರಶ್ನಿಸಿದ ಕುಮಾರ್ ಬಂಗಾರಪ್ಪ, ಅವರು ರಾಜಕೀಯ ಮಾಡುವುದಾದರೆ ಚಲನಚಿತ್ರದ ಕವಚ ಬಿಚ್ಚಿಟ್ಟು ಬಂದು ರಾಜಕೀಯ ಮಾಡಲಿ ಎಂದು ಸವಾಲು ಹಾಕಿದರು.