ಶಿವಮೊಗ್ಗ: ಟ್ರಾನ್ಸಫರ್ ವಿಷಯದಲ್ಲಿ ಮಧು ಬಂಗಾರಪ್ಪ ಮೂರ್ಖತನದ ಹೇಳಿಕೆ ನೀಡಿದ್ದಾರೆ. ಟೀಚರ್ಸ್ ಟ್ರಾನ್ಸ್‌ಫರ್ ಆಗುವುದು ಕೌನ್ಸೆಲಿಂಗ್ ಮೂಲಕ. ಸಿಎಂ ಕೂಡ ವರ್ಗಾವಣೆಯಲ್ಲಿ ಏನು ಮಾಡೋಕೆ ಆಗುವುದಿಲ್ಲ ಎಂದು ಮಧು ಬಂಗಾರಪ್ಪ ವಿರುದ್ಧ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು. ನಗರದಲ್ಲಿ ಬುಧವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಧು ಬಂಗಾರಪ್ಪ ತಾಲೂಕು ಹಾಗೂ ರಾಜಕಾರಣ ಬಿಟ್ಟು ಬಹಳ ದಿನ ಆಗಿದೆ. 6.6 ಕೋಟಿ ಚೆಕ್ ಬೌನ್ಸ್ ಕೇಸ್ ಅಲ್ಲಿ ಬೇಲ್ ಪಡೆದುಕೊಂಡು ಓಡಾಡುತ್ತಿದ್ದಾರೆ. ನನಗೆ ಬಿಜೆಪಿ ಸಿದ್ಧಾಂತ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ನನಗೆ ಪಕ್ಷ ಸಿದ್ಧಾಂತ ಕಲಿಸಿಕೊಟ್ಟಿದೆ. ಮುಂದೆಯೂ ಸಿದ್ಧಾಂತ ಕಲಿಯುತ್ತೇನೆ. ಇವರು ಮೊದಲು ಸ್ಫರ್ಧೆ ಮಾಡಿದ್ದು ಯಾವ ಪಾರ್ಟಿಯಿಂದ.? ಇವರು ರನ್ನಿಂಗ್ ನಲ್ಲಿದ್ದಾರೆ ಬಿಜೆಪಿ, ಸಮಾಜವಾದಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಹೋಗುತ್ತಿದ್ದಾರೆ. ಆಪ್ ಪಾರ್ಟಿ ಒಂದು ಬಾಕಿ ಇದೆ. ಅದಕ್ಕೂ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ವರ್ಗಾವಣೆ ಸಂಬಂಧ ಪತ್ರಗಳಿದ್ದರೇ ಅವರು ಪ್ರೂವ್ ಮಾಡಲಿ ಇಲ್ಲವಾದ್ರೇ ಎಲ್ಲರೂ ರಾಜೀನಾಮೆ ಕೊಡಲಿ
ಸೊರಬದಲ್ಲಿ 14 ತಹಶೀಲ್ದಾರ್ಗಳ ವರ್ಗಾವಣೆ ಮಾಡಿದ್ದೇನೆ ಎಂಬ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರುಗಳ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಕುಮಾರ್ ಬಂಗಾರಪ್ಪ ಹೇಳಿದರು. ಸೊರಬದ ವಿಚಾರದಲ್ಲಿ ಕೆಲವು ಸಂಘಟನೆಗಳು ತಮ್ಮ ಅಭಿಪ್ರಾಯ ಹೇಳುತ್ತಿವೆ. ರಾಜಕೀಯ, ಆಡಳಿತಾತ್ಮಕವಾಗಿ ಸಹ ಮಾತನಾಡುತ್ತಿದ್ದಾರೆ. ಕಂದಾಯ ಇಲಾಖೆ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು ಎಂದರು.
ಶಿವಮೊಗ್ಗದ ಬಹುತೇಕ ತಾಲೂಕುಗಳಲ್ಲಿ ಗ್ರೇಡ್-1 ತಹಶೀಲ್ದಾರ್ಗಳೇ ಇಲ್ಲ. ಎಲ್ಲಾ ಕಡೆಯಲ್ಲೂ ಗ್ರೇಡ್-2 ತಹಶೀಲ್ದಾರ್ಗಳೇ ಕೆಲಸ ಮಾಡುತ್ತಿದ್ದಾರೆ. ನಾನು 14 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿಸಿದ್ದೇನೆಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರು ಹೇಳುತ್ತಿದ್ದಾರೆ. ಈವರೆಗೆ ನಾನು ಒಬ್ಬ ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಿ ಎಂದು ಯಾರಿಗು ಪತ್ರ ಕೊಟ್ಟಿಲ್ಲ. ಈ ಸಂಬಂಧ ಕಂದಾಯ ಸಚಿವರು, ಸಿಎಂ ಅವರನ್ನು ಕೂಡ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ರಾಜಕೀಯ ಅಜೆಂಡಾ ಇಟ್ಟುಕೊಂಡು ಹೀಗೆ ಮಾತನಾಡುತ್ತಿದ್ದಾರೆ. ವರ್ಗಾವಣೆ ಸಂಬಂಧ ನನ್ನ ಪತ್ರಗಳಿದ್ದರೇ ಅವರು ಪ್ರೂವ್ ಮಾಡಲಿ, ಇಲ್ಲವಾದ್ರೇ ಎಲ್ಲರೂ ರಾಜೀನಾಮೆ ಕೊಡಲಿ ಎಂದು ಸವಾಲು ಹಾಕಿದರು. ಈಗ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕಂದಾಯ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರೇ ಸ್ವತಃ ತಪ್ಪು ಮಾಡುತ್ತಿದ್ದಾರೆ. ಅಧ್ಯಕ್ಷ ಅರುಣ್ ಕುಮಾರ್ ಕಂದಾಯ ಇಲಾಖೆಯಲ್ಲಿ ಆರ್ಐ ಹುದ್ದೆಯಲ್ಲಿ ಕೆಲಸ ಮಾಡಬೇಕು. ಖಾಲಿ ಇದೆ ಎಂದು ಪ್ರಭಾವ ಬಳಸಿ, ಶಿರೆಸ್ತೇದಾರ್ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ. ಸರ್ಕಾರ ಮೊದಲು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸೊರಬದಲ್ಲಿ ಕೆಲವು ಅಧಿಕಾರಿಗಳು 8-10 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. 94ಸಿ ಇರುವ ಆಯಕಟ್ಟಿನ ಹುದ್ದೇಯೇ ಬೇಕು ಅವರಿಗೆ ಬೇರೆ ಯಾವುದು ಆಗಲ್ಲ. ಸೊರಬ, ಸಾಗರಕ್ಕೆ ಅವರೇ ಕೇಳಿಕೊಂಡು ಹೋಗ್ತಾ ಇದ್ದಾರೆ. ನಾನು ಕಂದಾಯ ಸಚಿವರಿಗೆ ಖಾಲಿ ಇರುವ ಸ್ಥಾನ ಭರ್ತಿ ಮಾಡುವಂತೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು. ಸೊರಬ ತಾಲೂಕಿಗೆ ಬಂದಿದ್ದೇ ಮೂವರು ಗ್ರೇಡ್ -1 ತಹಶೀಲ್ದಾರ್ಗಳು. ಉಳಿದವರು ಪ್ರೊಬೆಶನರಿ ಹಾಗೂ ಗ್ರೇಡ್ -2 ತಹಶೀಲ್ದಾರ್ಗಳು. ಪ್ರಿನ್ಸಿಪಲ್ ಸೆಕ್ರೇಟರಿಗಳು ಎಷ್ಟು ಜನ ಟ್ರಾನ್ಸ್‌ಫರ್ ಆಯ್ತು. ಯಾಕೇ ರಾಜ್ಯ ಸಂಘ ಪ್ರತಿಭಟನೆ ಮಾಡಲಿಲ್ಲ. ನೀವು ಸರಿಯಾಗಿದ್ದರೇ ಮತ್ತೇ ಅದೇ ಸ್ಥಾನಕ್ಕೆ ಬರಬಹುದು ಅಲ್ವಾ..? ವರ್ಗಾವಣೆ ಮಾಡೋದು ನನ್ನ ಕೈಯಲ್ಲಿ ಇಲ್ಲ.
ಅದು ಒಂದು ಸರ್ಕಾರದ ಪ್ರಕ್ರಿಯೆ. ಈ ಹಿಂದೆ ಸೊರಬ ತಾಲೂಕಿನಲ್ಲಿದ್ದ ತಹಸೀಲ್ದಾರ್ ಅನಧಿಕೃತ ಭೋಗಸ್ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದರು. ಪತ್ನಿಯ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದರು. ಶ್ರೀಮಂತರಿಗೆಯೇ ಹತ್ತಾರು ಎಕರೆ ಬಗರ್‌ಹುಕುಂ ಜಮೀನನ್ನು ನೀಡಿ ಸರ್ಕಾರದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದರು. ಆಗ ಏಕೆ ಈ ಕಂದಾಯ ಇಲಾಖೆ ನೌಕರರು ಪ್ರತಿಭಟನೆ ಮಾಡಲಿಲ್ಲ. ರಾಜ್ಯಾಧ್ಯಕ್ಷರಾಗಲಿ, ಜಿಲ್ಲಾಧ್ಯಕ್ಷರಾಗಲಿ ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಆರ್.ಡಿ.ಪಾಟೀಲ್ ಒಬ್ಬ ಬುದ್ಧಿವಂತ ಕ್ರಿಮಿನಲ್, ಆತನ ವಿಚಾರಣೆ ನಡೆಯತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ