ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆ.ಎಸ್.ಆರ್.ಟಿ.ಸಿ) ಹೆಸರಿನಲ್ಲಿ ಚಾಲಕರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ ಎನ್.ಜಿ.ಓ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಾಖೆಯಲ್ಲಿ ಕೇವಲ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಚಾಲಕರು ಕಂ ನಿರ್ವಹಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಕೇವಲ ಚಾಲಕರು ಬೇಕಾಗಿದ್ದಾರೆ ಎಂದು ನಿಗಮದ ಹೆಸರಿನಲ್ಲಿ ಜಾಹೀರಾತು ನೀಡಲಾಗಿದೆ. ಈ ಸಂಬಂಧ ಶಿವಮೊಗ್ಗ ವಿಭಾಗಾಧಿಕಾರಿ ಮರಿಗೌಡ ದೂರು ದಾಖಲಿಸಿದ್ದಾರೆ.
ನೇಮಕದ ಜಾಹೀರಾತನ್ನು ಬೆಂಗಳೂರಿನ ಕೇಂದ್ರ ಕಚೇರಿ ಹಾಗೂ ಶಿವಮೊಗ್ಗದ ಕಚೇರಿಯಿಂದ ನೀಡಿಲ್ಲ. ಆದ್ದರಿಂದ ಹೆಸರನ್ನು ದುರುಪಯೋಗ ಮಾಡಿಕೊಂಡು ಅಮಾಯಕರಿಗೆ ಉದ್ಯೋಗ ಆಮಿಷವೊಡ್ಡಿ ಜಾಹೀರಾತು ನೀಡಲಾಗಿದೆ. ಜಾಹೀರಾತಿನಲ್ಲಿ ನೇಮಕಕ್ಕೆ 7ನೇ ತರಗತಿ ವಿದ್ಯಾರ್ಹತೆ ಎಂದು ಹೇಳಿದೆ. ನಮ್ಮ ನಿಗಮದಲ್ಲಿ ಕನಿಷ್ಠ ವಿದ್ಯಾರ್ಹತೆ 10 ನೇ ತರಗತಿ ಎಂದು ಇದೆ. ಪತ್ರಿಕಾ ಜಾಹೀರಾತಿನಲ್ಲಿ 650 ಚಾಲಕರ ಹುದ್ದೆಗೆ ಆಹ್ವಾನ ನೀಡಿದ್ದು, ಪ್ರತಿ ಓರ್ವರಿಂದ 25 ಸಾವಿರ ಠೇವಣಿ ಇಡುವಂತೆ ಜಾಹೀರಾತು ನೀಡಲಾಗಿದೆ. ಈ ಸಂಬಂಧ ಹೆಸರನ್ನು ದುರುಪಯೋಗ ಮಾಡಿಕೊಂಡ ಸನ್ಮಾರ್ಗ ಎನ್.ಜಿ.ಓ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕೆಂದು ಅಧಿಕಾರಿ ಮರಿಗೌಡ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಅಧಿಕಾರಿಯ ಆರೋಪವನ್ನು ಸನ್ಮಾರ್ಗ್ ಎನ್.ಜಿ.ಓ ಮುಖ್ಯಸ್ಥ ಸುರೇಶ್ ಬಾಳೆಗುಂದಿ ಅಲ್ಲಗಳೆದರು. ಈ ಜಾಹೀರಾತನ್ನು ನೀಡಿದ್ದು ನಮ್ಮ ಎನ್.ಜಿ.ಓ ನೇ ಆಗಿದ್ದು, ನಮಗೆ ಕೆ.ಎಸ್.ಆರ್.ಟಿ.ಸಿ ಗೆ ಚಾಲಕರು ಬೇಕಾಗಿದ್ದಾರೆ ಎಂದು ನಮ್ಮ ಸನ್ಮಾರ್ಗ್ ಎನ್.ಜಿ.ಓ ಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಆದರೆ ಈ ಬಗ್ಗೆ ತಿಳಿಯದೆ ನಮ್ಮ ಎನ್ ಜಿ.ಓ ಮೇಲೆ ದೂರು ನೀಡಿದ್ದಾರೆ. ಇದರಿಂದ ನಮ್ಮ ಮೇಲೆ ಇರುವ ಆರೋಪದ ಕುರಿತು ಅವರಿಗೆ ತಿಳಿಸಲಾಗುವುದು ಎಂದು ಸನ್ಮಾರ್ಗ್ ಎನ್. ಜಿ.ಓ ಮುಖ್ಯಸ್ಥ ಸುರೇಶ್ ತಿಳಿಸಿದರು.
ಇದನ್ನೂ ಓದಿ :ನೋ ವರ್ಕ್ ನೋ ಪೇ: ಸಾರಿಗೆ ನೌಕರರಿಗೆ ನೋಟಿಸ್ ಜಾರಿ ಮಾಡಿದ ಕಿಪ್ಕೋ