ಶಿವಮೊಗ್ಗ: ಕೇಂದ್ರ ಸರ್ಕಾರ ಭಗತ್ ಸಿಂಗ್ ಜನ್ಮ ದಿನದಂದು ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದೆ. ಇದರಿಂದ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು ಪಿಎಫ್ಐ ನಿಷೇಧ ಮಾಡಲಾಗಿದೆ. ಪಿಎಫ್ಐ ದೇಶದ್ರೋಹ ಚಟುವಟಿಕೆ ನಡೆಸುತ್ತಿತ್ತು. ವಿದೇಶದಿಂದ ಹಣ ಪಡೆದು ದ್ರೋಹ ಎಸಗುತ್ತಿತ್ತು.' ನಗು ನಗುತ್ತ ಪಾಕಿಸ್ತಾನ ಪಡೆದುಕೊಂಡ್ವಿ, ಹೋರಾಟ ಮಾಡಿ ಹಿಂದೂಸ್ಥಾನ್ ಪಡೆಯುತ್ತೇವೆ' ಎಂಬ ಘೋಷಣೆಯನ್ನು ಅವರು ಹಾಕುತ್ತಿದ್ದರು. ದೇಶದ್ರೋಹಿಗಳಿಗೆ ಅಮಿತ್ ಶಾ ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ಅಮಿತ್ ಶಾ ಅವರು ರಾಷ್ಟ್ರದ್ರೋಹವನ್ನ ಸಹಿಸಲ್ಲ, ಪಿಎಫ್ಐ ನಿಷೇಧಕ್ಕೆ ರಾಜಕೀಯ ತರಬಾರದು ಎಂದರು.
ಇದನ್ನೂ ಓದಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯುಎಪಿಎ ಕಾಯ್ದೆಯಡಿ ಬ್ಯಾನ್.. ಇಲ್ಲಿದೆ ಸಂಪೂರ್ಣ ವಿವರ
ಪಿಎಫ್ಐ ಬ್ಯಾನ್ ಬಗ್ಗೆ ಸಿದ್ದರಾಮಯ್ಯಗೆ ತಿಳಿಸಿದ್ದೆ: ಪಿಎಫ್ಐ ಬ್ಯಾನ್ ಮಾಡಿ ಎಂದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೇಳಿದ್ವಿ. ಆದರೆ, ಅವರು ನಿಮ್ಮದೇ ಕೇಂದ್ರ ಸರ್ಕಾರ ಇದೆ ಮಾಡಿಸಿ ಎಂದು ಹೇಳಿದ್ರು. ಆದರೆ, ಆಗ ರಾಜ್ಯದಿಂದ ಕೇಂದ್ರಕ್ಕೆ ಯಾವುದೇ ವರದಿ ನೀಡಿರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಬಳಿಕ ಕೇಂದ್ರಕ್ಕೆ ವರದಿ ಕಳುಹಿಸಿದೆ. ಪಿಎಫ್ಐ ಮತ್ತೆ ಬೇರೆ ಹೆಸರಿನಲ್ಲಿ ಬಂದ್ರೆ ನಮ್ಮ ಸಿಂಹ ಅಮಿತ್ ಶಾ ಬಿಡುವುದಿಲ್ಲ ಎಂದರು.
ಹರ್ಷ ಕೊಲೆ ಪ್ರಕರಣ ಹಾಗೂ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕ ಇರುವುದು ಪತ್ತೆಯಾಗಿತ್ತು. ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶವಿಲ್ಲ. ಮುಸಲ್ಮಾನ ಹಿರಿಯರಿಗೆ ಮನವಿ ಮಾಡುತ್ತೇನೆ. ನಿಮ್ಮ ಯುವಕರಿಗೆ ದೇಶದ್ರೋಹ ಚಟುವಟಿಕೆ ನಡೆಸದಂತೆ ತಿಳಿಸಿ. ನೀವೆಲ್ಲಾ ದೇಶ ಭಕ್ತರಿಗೆ ಪ್ರೇರಣೆ ನೀಡಬೇಕು ಎಂದರು.
ಇದನ್ನೂ ಓದಿ: Big News: ಪಿಎಫ್ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ
ಸಿದ್ದರಾಮಯ್ಯನವರ ಅವಧಿಯಲ್ಲಿ 22 ಹಿಂದೂ ಯುವಕರ ಕೊಲೆಯಾಗಿತ್ತು. ಮಸಲ್ಮಾನರನ್ನು, ಗೂಂಡಾಗಳನ್ನು ಕಾಂಗ್ರೆಸ್ನವರು ಬೆಳೆಸಿಕೊಂಡು ಬಂದರು. ಅದಕ್ಕೆ ಮೋದಿ ತಡೆಯೊಡ್ಡಿದ್ದಾರೆ ಎಂದರು.
ನಲಪಾಡ್ ಹೇಳಿಕೆ ಖಂಡಿಸುತ್ತೇನೆ: ಮೊಹಮ್ಮದ್ ನಲಪಾಡ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಿರುದ್ಯೋಗದಿಂದ ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂಬ ಹೇಳಿಕೆ ಖಂಡನಿಯ. ಉಗ್ರವಾದಕ್ಕೆ ನಿರುದ್ಯೋಗ ಕಾರಣ ಎಂಬುದು ಸರಿಯಲ್ಲ. ಅವನು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಇದನ್ನೂ ಓದಿ: ಭಾರತದಲ್ಲಿ ಪಿಎಫ್ಐ ನಿಷೇಧ: ಪ್ರತಿಭಟನಾಕಾರರಿಗೆ ಎಚ್ಚರಿಕೆ ರವಾನಿಸಿದ ಡಿಜಿ ಪ್ರವೀಣ್ ಸೂದ್