ಶಿವಮೊಗ್ಗ: ಅತ್ಯಾಚಾರ ನಡೆಸುವವರಿಗೆ ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರುವ ಕುರಿತು ಕ್ಯಾಬಿನೆಟ್ನಲ್ಲಿ ಸೂಕ್ತ ಚರ್ಚೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ಆಯನೂರು ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ಅತ್ಯಾಚಾರಿಗಳ ವಿರುದ್ಧ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಆ ಕೆಲಸ ಇನ್ನೂ ಆಗಿಲ್ಲ. ಅತ್ಯಾಚಾರ ನಡೆಸುವವರಿಗೆ ಕಾನೂನು ಹಾಗೂ ಪೊಲೀಸರ ಬಗ್ಗೆ ಭಯವಿಲ್ಲ. ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರಲಾಗುವುದು ಎಂದರು.
'ಪ್ರಕರಣ ಭೇದಿಸಲು ಸಚಿವರಿಂದ ಶ್ರಮ'
ಗೃಹ ಸಚಿವ ಆರಗ ಜ್ಞಾನೇಂದ್ರ ಅತ್ಯಾಚಾರ ಪ್ರಕರಣವನ್ನು ಭೇದಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ್ದಾರೆ. ಕಿಡಿಗೇಡಿ, ನೀಚರನ್ನು ಹುಡುಕಿ ಬಂಧಿಸಿರುವುದು ನನಗೆ ಸಂತೋಷವಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಯಡಿಯೂರಪ್ಪ, ನಾನು ಅಣ್ಣ-ತಮ್ಮ
ಯಡಿಯೂರಪ್ಪ ಹಾಗೂ ನಾನು ಅಣ್ಣ ತಮ್ಮಂದಿರಂತೆ, ಅವರ ಮನೆಗೆ ನಾವು ಹೋಗುತ್ತೇವೆ, ಅವರು ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲಾ ಒಂದೇ. ನೀವು ಸರಿಯಾಗಿ ನೋಡಬೇಕೆಂದು ಮಾಧ್ಯಮದವರನ್ನು ಕಿಚಾಯಿಸಿದರು. ಈ ವೇಳೆ ಸಂಸದ ರಾಘವೇಂದ್ರ, ಶಾಸಕ ಅಶೋಕ ನಾಯ್ಕ ಹಾಜರಿದ್ದರು.