ಶಿವಮೊಗ್ಗ : ಹಿಂದೂಗಳ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಉದಯಪುರದ ಮೋದಿ ಕೊಲೆ ಬೆದರಿಕೆ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು,ಈ ಹೇಳಿಕೆಯನ್ನು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಎಲ್ಲರೂ ಖಂಡಿಸಬೇಕು. ವಿಶ್ವಸಂಸ್ಥೆಯೂ ಈ ಬಗ್ಗೆ ಗಮನಹರಿಸಬೇಕು. ಉದಯಪುರದಲ್ಲಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಇಂತಹ ಘಟನೆಯಲ್ಲಿ ವಿಶೇಷ ಕಾನೂನು ಜಾರಿ ಮಾಡುವ ಮೂಲಕ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಇನ್ನೂ ವಿಶೇಷ ಕಾನೂನು ರಚಿಸುವಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಒತ್ತಾಯಿಸಿದರು. ಮೋದಿ ಶಾಂತಿ ಶಾಂತಿ ಅಂತಾರೆ. ಆದರೆ, ಮೋದಿ ಕೊಲೆಯ ಕುರಿತು ಹೀಗೆ ಬಹಿರಂಗ ಹೇಳಿಕೆ ನೀಡಿದರೆ ಸುಮ್ಮನೆ ಇರಲು ಸಾಧ್ಯವೇ?. ಕೊಲೆಗೆ ಕೊಲೆಯಿಂದಲೇ ಉತ್ತರ ನೀಡಬೇಕಾಗುತ್ತದೆ ಎಂದರು.
ಈ ಘಟನೆಯನ್ನು ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಯಾರೂ ಖಂಡಿಸಿಲ್ಲ. ಮುಸ್ಲಿಂ ಗೂಂಡಾಗಳು ಇಂತಹ ಕೃತ್ಯವನ್ನು ಮಾಡಿದ್ದಾರೆ. ಬೆದರಿಕೆ ಹಾಕಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಮೋದಿಗೆ ಜೀವ ಬೆದರಿಕೆ ನೀಡಿದ ಕುರಿತು ವಿಶ್ವಸಂಸ್ಥೆ ಕೂಡ ಗಮನ ಹರಿಸಬೇಕು.
ಏಕೆಂದರೆ, ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಾಯಕ. ಎಲ್ಲಾ ಜಾತಿ-ಧರ್ಮ ಒಂದೇ ಎನ್ನುವುದು ಮೋದಿ ಮಂತ್ರ. ಇದು ಭಾರತ ದೇಶ. ಮುಸ್ಲಿಂ ಗೂಂಡಾಗಳ ಆಟ ನಡೆಯುವುದಿಲ್ಲ. ಅವರಿಗೆ ತಕ್ಕ ಪಾಠವನ್ನ ದೇಶದ ಕಾನೂನು ಕಲಿಸುತ್ತದೆ ಎಂದರು.