ಶಿವಮೊಗ್ಗ: ಜಿಲ್ಲಾ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಪೊಲೀಸರು ತಾರತಮ್ಯ ಮಾಡದೆ ಕೆಲಸ ನಿರ್ವಹಿಸಬೇಕು ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಶಾಸಕರಾದ ಕೆ. ಬಿ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಶಿವಮೊಗ್ಗ ನಗರದಲ್ಲಿನ ಬೆಳವಣಿಗೆಗಳು ಪೊಲೀಸ್ ಇಲಾಖೆಯತ್ತ ಬೆರಳು ಮಾಡುವಂತೆ ಮಾಡಿದೆ. ಆಗಸ್ಟ್ 15 ರಿಂದ ಪೊಲೀಸರು ಬರುವುದು, ಅಂಗಡಿ ಮುಚ್ಚುವುದನ್ನು ಮಾಡುತ್ತಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಸಿಬ್ಬಂದಿ ಕರ್ತವ್ಯವಾಗಿದೆ. ಹಾಗಂತ ವ್ಯಾಪಾರಿಗಳಿಗೆ ಬಂದು ಅಂಗಡಿ ಮುಚ್ಚಿಸುವುದನ್ನು ಮಾತ್ರ ಮಾಡದೆ ನಿಜವಾದ ಆರೋಪಿಗಳನ್ನು ಹಿಡಿದು ಶಿಕ್ಷಿಸಬೇಕಿದೆ. ಆದರೆ, ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನೆ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅವರ ಜೊತೆಗೆ ಇರುತ್ತೇವೆ: ಆಗಸ್ಟ್ 15 ರಂದು ದುರ್ಗಿಗುಡಿಯಲ್ಲಿ ಓರ್ವ ಎಎಸ್ಐ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ. ಆದ್ರೆ, ಇನ್ನೂ ಎಫ್ ಐ ಆರ್ ಹಾಕಿಲ್ಲ. ಪೊಲೀಸರು ಜನರ ನಂಬಿಕೆಗೆ ದ್ರೋಹ ಮಾಡಬಾರದು. ಪೊಲೀಸರು ಯಾರೇ ತಪ್ಪು ಮಾಡಿದ್ರು ಅವರ ಮೇಲೆ ಕ್ರಮ ಜರುಗಿಸಬೇಕು. ಆದ್ರೆ, ಅದು ಶಿವಮೊಗ್ಗದಲ್ಲಿ ಆಗುತ್ತಿಲ್ಲ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ರೆ ನಾವು ಅವರ ಜೊತೆಗೆ ಇರುತ್ತೇವೆ ಎಂದು ಹೇಳಿದರು.
ಹೋರಾಟ ಅನಿವಾರ್ಯವಾಗುತ್ತದೆ : ಚುನಾವಣೆ ಬರ್ತವೆ ಹೋಗ್ತಾವೆ. ನಮ್ಮ ನಗರದಲ್ಲಿ ಗಲಾಟೆಗಳೇನು ಹೊಸದಲ್ಲ. ನಮ್ಮ ಶಾಸಕರು ಇದೇನು ಹೊಸದೇನಲ್ಲ. ಆದ್ರೆ ಇಲ್ಲಿ ಶಾಸಕರ ವಿಫಲತೆ ಎದ್ದು ಕಾಣುತ್ತಿದೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದರು. ಶಾಸಕರು ವಿಫಲರಾದಾಗ ಜನ ಪೊಲೀಸರ ಬಳಿ ಬರ್ತಾರೆ. ಪೊಲೀಸರು ಸರಿಯಾದ ಕ್ರಮ ಜರುಗಿಸದೆ ಹೋದ್ರೆ ಮುಂದೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕೆ ಬಿ ಪ್ರಸನ್ನ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಓದಿ: ಶಿವಮೊಗ್ಗ: ಗಣೇಶೋತ್ಸವ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಸೂಚನೆ