ಶಿವಮೊಗ್ಗ: ಮಾಜಿ ಸಚಿವ, ಸಜ್ಜನ ರಾಜಕಾರಣಿ ಎಂದು ಹೆಸರುವಾಸಿವಾಗಿರುವ ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಮತ್ತೆ ಕರಿ ಕೋಟು ತೊಟ್ಟು ವಕೀಲಿ ವೃತ್ತಿಗೆ ಮರಳಿದ್ದಾರೆ. ಒಮ್ಮೆ ರಾಜಕೀಯಕ್ಕೆ ಬಂದ್ರೆ, ಹಿಂದಿನ ತಮ್ಮ ಉದ್ಯೋಗವನ್ನೆ ಮರೆತು ಬಿಡುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಕಿಮ್ಮನೆ ರತ್ನಾಕರ್ ತಮ್ಮ ವಕೀಲಿ ವೃತ್ತಿಯನ್ನು ಪುನರಾರಂಭ ಮಾಡಿದ್ದಾರೆ.
ಜಿಲ್ಲಾ ಕೋರ್ಟ್ನಲ್ಲಿ ತಮ್ಮದೇ ಕೇಸ್ಗಾಗಿ ವಾದ ಮಾಡಲು ಕೋರ್ಟ್ಗೆ ಬಂದಿದ್ದರು. ಈ ವೇಳೆ ಕೋರ್ಟ್ನಲ್ಲಿನ ಇತರೆ ವಕೀಲರಿಗೆ ಅಚ್ಚರಿ ಕಾದಿತ್ತು. ಅರೇ ಇದೇನಪ್ಪ ಮಾಜಿ ಶಾಸಕರು ಹೀಗೆ ಕೋಟು ಧರಿಸಿ ಬಂದಿದ್ದಾರೆ ಎಂದು ನೋಡಿ ಅಚ್ಚರಿ ಪಟ್ಟರು. ಕೊನೆಗೆ ತಮ್ಮ ಕೇಸ್ನ್ನೆ ವಾದ ಮಾಡೊದಕ್ಕೆ ಬಂದಿದ್ದು ಎಂದ ಮೇಲೆ ಕೆಲವರು ನಿರಾಳರಾದರು.
ಕಿಮ್ಮನೆ ರತ್ನಾಕರ್ 1977 ರಲ್ಲಿ ತೀರ್ಥಹಳ್ಳಿಯಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು. ಆವಾಗಲೇ ಬಾರ್ ಕೌನ್ಸಿಲ್ನಲ್ಲಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಇವರು 1977 ರಿಂದ 2007 ರ ತನಕ ವಕೀಲ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದು, ಸುಮಾರು 4,200 ಕೇಸ್ ನಡೆಸಿದ್ದಾರೆ. ಈಗಾಗಲೇ ಸುಮಾರು 2,000 ಕೇಸ್ಗಳಿಗೆ ವಾದ ಮಾಡಿ ಮುಗಿಸಿದ್ದರು. ಇವರು ಶಾಸಕರಾಗಿ ಆಯ್ಕೆಯಾಗುತ್ತಲೇ ವಕೀಲ ವೃತ್ತಿಯನ್ನು ಬಿಟ್ಟು ಉಳಿದ ಕೇಸ್ ತಮ್ಮ ಜ್ಯೂನಿಯರ್ಗಳಿಗೆ ನೀಡಿದ್ದರು. ಇವರು ಹಿಂದೆ ರೈತ ಹೋರಾಟ, ಭೂ ಹೋರಾಟದ ಕೇಸುಗಳನ್ನು ಉಚಿತವಾಗಿ ಒಂದು ಸ್ಟಾಂಪ್ಗೂ ಸಹ ಪಡೆಯದೆ ನಡೆಸಿದ್ದರು.
ನಾನು ಕಳೆದ ಚುನಾವಣೆಯಲ್ಲಿ ಸೋತಿರುವ ಕಾರಣ ನನ್ನ ವೃತ್ತಿ ಜೀವನಕ್ಕೆ ನಾನು ಬಂದಿದ್ದೇನೆ. ಈ ಕೋಟು ಹಾಕಲು ನನಗೆ ಸಂತೋಷ ಎಂದೆನ್ನಿಸುತ್ತದೆ. ನಾನು ನನ್ನ ಕ್ಷೇತ್ರ ತೀರ್ಥಹಳ್ಳಿಯಲ್ಲಿ ವಕಾಲತ್ತು ಹಾಕುವುದಿಲ್ಲ, ಬದಲಾಗಿ ಶಿವಮೊಗ್ಗ, ಬೆಂಗಳೂರು ಕೋರ್ಟ್ಗಳಲ್ಲಿ ವಾಕಾಲತ್ತು ಹಾಕುತ್ತೆನೆ ಎಂದರು. ನಾನು ವಕೀಲ ವೃತ್ತಿಗೆ ಬಂದಿದ್ದರು ರಾಜಕೀಯವನ್ನು ಬಿಡೂದಿಲ್ಲ. ಅದನ್ನು ಜೊತೆಗೆ ಮಾಡುತ್ತೆನೆ ಎಂದರು. ಕಿಮ್ಮನೆ ರತ್ನಾಕರ್ ರವರ ಮೊದಲ ದಿನವೇ ಗೆಲುವು ಎಂಬಂತೆ ಇವರ ಎದುರಾಳಿ ವಕೀಲರು ಕೋರ್ಟ್ಗೆ ಗೈರು ಹಾಜರಿದ್ದರು.