ಶಿವಮೊಗ್ಗ: ಭಾರತ ಸರ್ಕಾರ ಈಗ ಆಪರೇಷನ್ ಗಂಗಾ ಮಾಡುವ ಬದಲು ಯುದ್ಧಕ್ಕಿಂತ ಮೊದಲೇ ಮಾಡಬೇಕಿತ್ತು ಎಂದು ಉಕ್ರೇನ್ನಿಂದ ಮರಳಿದ ಸಾಗರದ ಅಣೆಲೆಕೊಪ್ಪದ ವಿದ್ಯಾರ್ಥಿನಿ ಮನೀಷಾ ಲೋಬೋ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿನ ಭಾರತೀಯ ರಾಯಭಾರ ಕಚೇರಿಯವರು ನಮಗೆ ಸಹಾಯ ಮಾಡುವುದನ್ನು ಬಿಟ್ಟು ಅವರೇ ಓಡಿ ಹೋದ್ರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಈಗ ಉಚಿತ ವಿಮಾನವನ್ನು ಕಳುಹಿಸುವ ಬದಲು ಯುದ್ದ ಪ್ರಾರಂಭವಾಗುತ್ತದೆ ಎಂದು ತಿಳಿದಾಗಲೇ ಕಳುಹಿಸಿದ್ದರೆ, ಹಾವೇರಿಯ ನವೀನ್ ಸಾಯುತ್ತಿರಲಿಲ್ಲ ಎಂದರು.
ಅಲ್ಲಿನ 7 ಸಾವಿರ ಅಂದ್ರೆ ಇಲ್ಲಿನ 85 ಸಾವಿರ ರೂಪಾಯಿ ಆಗುತ್ತದೆ. ಅಲ್ಲಿ ಹಣ ತೆಗೆಯುವುದಕ್ಕೆ ನಿಯಂತ್ರಣ ಹೇರಿದ್ದರು. ವಿಮಾನಕ್ಕೆ ಹಣ ತೆಗೆದು ಕೊಡುವುದಕ್ಕೆ ಎರಡು ದಿನ ಬೇಕಾಗುತ್ತದೆ. ಅಷ್ಟರಲ್ಲಿ ಮತ್ತೆ ವಿಮಾನ ದರ ಏರಿಕೆ ಮಾಡಲಾಗಿತ್ತು ಎಂದು ಮನೀಷಾ ಲೋಬೋ ವಿವರಿಸಿದರು.
ಮನೀಷಾ ತಂದೆ ಮಾತನಾಡಿ, ಭಾರತದಲ್ಲಿ ನಮಗೆ ಡೊನೇಷನ್ ಹಾವಳಿಯಿಂದಾಗಿ ಮಗಳನ್ನು ಉಕ್ರೇನ್‌ಗೆ ಕಳುಹಿಸಬೇಕಾಯಿತು. ಇಲ್ಲಿ ಡೊನೇಷನ್ ನೀಡಲೇಬೇಕು, ಅಲ್ಲಿ ಡೊನೇಷನ್ ಇಲ್ಲದ ಕಾರಣಕ್ಕೆ ಕಳುಹಿಸಲಾಯಿತು. ನನ್ನ ಮಗಳಿಗೆ ಇದುವರೆಗೂ ಭಾರತ ಸರ್ಕಾರವಾಗಲಿ ಅಥವಾ ಕರ್ನಾಟಕ ಸರ್ಕಾರದಿಂದಾಗಲಿ ಒಂದು ರೂಪಾಯಿ ಸಹ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.