ಶಿವಮೊಗ್ಗ : ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಡಿ.ಎಸ್.ಅರುಣ್ 344 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಈ ಮೂಲಕ ತಮ್ಮ ತಂದೆ ಡಿ.ಎಸ್ ಶಂಕರಮೂರ್ತಿರವರಂತೆ ಡಿ.ಎಸ್.ಅರುಣ್ ಮೇಲ್ಮನೆ ಮೂಲಕವೇ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿಯ ಅರುಣ್ 344 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಆರ್.ಪ್ರಸನ್ನಕುಮಾರ್ ವಿರುದ್ಧ ಜಯಗಳಿಸಿದ್ದಾರೆ.
ಇದು ಕಾರ್ಯರ್ತರ ಗೆಲುವು ಅರುಣ್ : ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಹಿಂದೆಯೇ ಹೇಳಿದ್ದೆ. ಇದು ಬಿಜೆಪಿಯ ಗೆಲುವು, ನಮ್ಮ ಕಾರ್ಯಕರ್ತರ ಗೆಲುವಾಗಿದೆ. ನಾವು ಹಿಂದೆಯೇ ಹೇಳಿದಷ್ಟು ಮತಗಳಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಐದು ದಿನ ನಡೆಸಿದ ಪ್ರಚಾರ ಸೇರಿದಂತೆ ಕೊನೆಯ ಮೂರು ದಿನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ನಡೆಸಿದ ಪ್ರಚಾರ ಗೆಲುವಿಗೆ ಸಹಕಾರಿಯಾಯಿತು. ಅಲ್ಲದೆ ನಮ್ಮ ಶಾಸಕರುಗಳು ಹಾಗೂ ಕಾರ್ಯಕರ್ತರ ಪರಿಶ್ರಮದ ಗೆಲುವು ಇದಾಗಿದೆ. ಇದರಿಂದ ಇದು ನಮ್ಮ ಕಾರ್ಯಕರ್ತರ ಗೆಲುವು ಎನ್ನಬಹುದು ಎಂದರು.
ಬಿಜೆಪಿಯ ಅರುಣ್ ಗೆಲುವು ಸಾಧಿಸುತ್ತಿದ್ದಂತಯೇ ಬಿಜೆಪಿ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತ್ತು. ಸಹ್ಯಾದ್ರಿ ಕಾಲೇಜು ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅರುಣ್ ಅವರು ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತಯೇ ಬಿಜೆಪಿಯ ಮಹಿಳಾ ಕಾರ್ಯಕರ್ತರು ಆರತಿ ಬೆಳಗಿದರು.
ಕಾರ್ಯಕರ್ತರು ಹಾರ, ತುರಾಯಿ ಹಾಕಿ ಸಂಭ್ರಮಿಸಿದರು. ನಂತರ ಬಿಜೆಪಿ ಕಾರ್ಯಕರ್ತರು ವಿದ್ಯಾನಗರದಿಂದ ಬಿಜೆಪಿ ಕಾರ್ಯಾಲಯದ ತನಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಮತಗಳ ವಿವರ :
ಒಟ್ಟು ಚಲಾವಣೆಯಾದ ಮತಗಳು: 4,156
ಬಿಜೆಪಿ ಡಿ.ಎಸ್.ಅರುಣ್ ಪಡೆದ ಮತ: 2,192
ಕಾಂಗ್ರೆಸ್ ಆರ್.ಪ್ರಸನ್ನ ಕುಮಾರ್ ಪಡೆದ ಮತ : 1,848
ಜೆಡಿಯುನ ಶಶಿ ಕುಮಾರ್ ಪಡೆದ ಮತ: 3
ರವಿ ಪಕ್ಷೇತರ ಪಡೆದ ಮತ : 4
ತಿರಸ್ಕೃತ ಮತಗಳು : 109.
ಇದನ್ನೂ ಓದಿ : ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಭರ್ಜರಿ ಜಯ: ಪಕ್ಷೇತರ ಲಖನ್ ಜಾರಕಿಹೊಳಿಗೆ ಮುನ್ನಡೆ