ಶಿವಮೊಗ್ಗ: ನಮ್ಮ ತ್ಯಾಗದಿಂದ ನಾಡಿನ ರೈತರು ಎದೆಯುಬ್ಬಿಸಿ ಬಾಳುತ್ತಿದ್ದು, ಮೂರು ವರ್ಷಗಳ ಯಡಿಯೂರಪ್ಪನವರ ಅವಧಿಯಲ್ಲಿ ಕರ್ನಾಟಕ ಸುವರ್ಣಯುಗವನ್ನು ಕಾಣುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭವಿಷ್ಯ ನುಡಿದರು.
ಶಿಕಾರಿಪುರ ತಾಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ರಾಜ್ಯ ಹಾಳಾಗುತ್ತಿರುವುದನ್ನು ನಾವೆಲ್ಲಾ ನೋಡಿದ್ದೇವೆ. 2018ರ ಸರ್ಕಾರವು ಯಾವುದೊ ನಾಲ್ಕೈದು ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ ನಮ್ಮೆಲ್ಲ ಸ್ನೇಹಿತರು ಯೋಚನೆ ಮಾಡಿ ಈ ಸರ್ಕಾರ ಉಳಿದರೆ ರಾಜ್ಯದ ಅಭಿವೃದ್ಧಿ ಆಗಲ್ಲ. ಈ ಸರ್ಕಾರವನ್ನು ತೆಗೆದು ಹಾಕಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮಾಡಲು ನಮ್ಮ ಶಾಸಕ ಸ್ಥಾನ ತ್ಯಾಗ ಮಾಡಿದ್ದೆವು ಎಂದರು.
ಇಂದು ನಮ್ಮ ತ್ಯಾಗ ಸಾರ್ಥಕವಾಗಿದೆ. ನಮ್ಮ ತ್ಯಾಗ ವ್ಯರ್ಥ ಆಗಿಲ್ಲ. ನಮಗೆ ಹೆಮ್ಮೆ ಅನಿಸುತ್ತಿದೆ. ನಮ್ಮ ತ್ಯಾಗದಿಂದ ನಾಡಿನ ರೈತರು ಎದೆ ಉಬ್ಬಿಸಿ ಬಾಳುತ್ತಿದ್ದಾರೆ. ಇನ್ನೂ ಮೂರು ವರ್ಷಗಳ ಯಡಿಯೂರಪ್ಪನವರ ಅವಧಿಯಲ್ಲಿ ಕರ್ನಾಟಕ ಸುವರ್ಣಯುಗವನ್ನು ಕಾಣುತ್ತದೆ ಎಂದರು.
ಸಿಎಂ ಯಡಿಯೂರಪ್ಪ ಕೊಡುಗೆ:
ಇದೇ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಇಳಿ ವಯಸ್ಸಿನಲ್ಲಿಯೂ ಕೂಡ ರಾಜ್ಯದ ನೇತೃತ್ವವನ್ನು ವಹಿಸಿಕೊಂಡು ದಕ್ಷ ಆಡಳಿತವನ್ನು ನೀಡುತ್ತಿರುವ ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬದ ಕೂಡಗೆಯಾಗಿ ನೀಡಿರುವ ಈ ನೀರಾವರಿ ಯೋಜನೆ ಎಂದರೆ ತಪ್ಪಾಗಲ್ಲ ಎಂದರು.
ಸುಮಾರು 1,500 ಕೋಟಿ ರೂ ವೆಚ್ಚದ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಮಾರ್ಗವಾಗಿ ಶಿಕಾರಿಪುರ, ರಾಣೆಬೆನ್ನೂರು-ಹುಬ್ಬಳ್ಳಿ ರೈಲು ಮಾರ್ಗ ಸಹ ಆಗಲಿದೆ ಎಂದು ಭರವಸೆ ನೀಡಿದರು.