ಶಿವಮೊಗ್ಗ: ದೇಶದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ, ದೇಶದ ಮುಂದಿನ ಭವಿಷ್ಯ ಬಿಜೆಪಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಓದಿ: ಸಿಎಂ ಪುತ್ರನಿಗೆ ವರ್ಕೌಟ್ ಆಗದ ಗೆಲುವಿನ ಹ್ಯಾ'ಟ್ರಿಕ್'.. ಮಾರುಹೋಗದ ಮಸ್ಕಿ ಮತದಾರರು..
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕಾಂಗ್ರೆಸ್ ಪಕ್ಷ ಬಂಗಾಳದಲ್ಲಿ ಹೆಸರಿಲ್ಲದಂತೆ ಆಗಿದೆ. ದೇಶದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ, ದೇಶದ ಮುಂದಿನ ಭವಿಷ್ಯ ಭಾರತೀಯ ಜನತಾ ಪಕ್ಷ ಎಂಬುವುದನ್ನು ಪಂಚರಾಜ್ಯ ಚುನಾವಣೆಗಳು ತಿಳಿಸುತ್ತಿವೆ ಎಂದರು.
ಭಾರತೀಯ ಜನತಾ ಪಾರ್ಟಿಗೆ ದೇಶದಲ್ಲಿನ ರಾಷ್ಟ್ರೀಯ ವಿಚಾರಗಳು ಬೆಂಬಲ ನೀಡುತ್ತಿವೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದ ಚುನಾವಣೆ ಸಾಕ್ಷಿ. ಮೂರು ಸ್ಥಾನಗಳಿಂದ 100 ಸೀಟುಗಳ ಸನಿಹಕ್ಕೆ ಹೋಗುತ್ತಿರುವುದು ಪ್ರಪಂಚದಲ್ಲೇ ಇದೊಂದು ದಾಖಲೆ. ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನದಿಂದ 40 ಸ್ಥಾನಕ್ಕೆ ಹೋದಾಗ ದೇಶವೇ ಆಶ್ಚರ್ಯ ಪಟ್ಟಿತ್ತು. ಆ ಶಕ್ತಿಯೇ ಇಂದು ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಸಹಕಾರಿಯಾಗಿದೆ. ಅದರಂತೆ ಮೂರು ಸೀಟುಗಳಿದ್ದ ಪಶ್ಚಿಮ ಬಂಗಾಳದಲ್ಲಿ ನೂರು ಸೀಟುಗಳ ಸನಿಹಕ್ಕೆ ಹೋಗುತ್ತಿರುವುದು ಸಂತೋಷ ತಂದಿದೆ ಎಂದರು.
ತಮಿಳುನಾಡಿನಲ್ಲೂ ಸಹ ಉತ್ತಮ ಬೆಳವಣಿಗೆಯಾಗಿದೆ. ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಯಾರೂ ಕಲ್ಪನೆ ಸಹ ಮಾಡಿರಲಿಲ್ಲ. ಅಸ್ಸಾಂನಲ್ಲಿ ನಿರೀಕ್ಷೆಗೂ ಮೀರಿ ಗೆಲ್ಲುತ್ತಿದ್ದೇವೆ ಎಂದು ಹೇಳಿದರು.