ಶಿವಮೊಗ್ಗ: 12ನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಇಡುವುದು ಸೂಕ್ತ ಎಂದು ಯುವನಿಧಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಯುವನಿಧಿ ಕಾರ್ಯಕ್ರಮದಲ್ಲಿ ಸಿಎಂ ಭಾಷಣಕ್ಕೂ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಒಬ್ಬ ಪ್ರಸಿದ್ಧ ಕವಿ, ಹೆಸರಾಂತ ತತ್ವಜ್ಞಾನಿಯಾಗಿದ್ದ ಅಲ್ಲಮಪ್ರಭುಗಳು ಶಿಕಾರಿಪುರದ ಬೆಳ್ಳಿಗಾವೆಯಲ್ಲಿ ಜನಿಸಿದವರು. ಅವರು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಅವರ ಹೆಸರಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಈ ವೇಳೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರ ಚಂದ್ರಶೇಖರ್ ಅಜಾದ್ ಹೆಸರಿಡಬೇಕು. ಈ ಹಿಂದೆಯೇ ಬಿ ಎಸ್ ಯಡಿಯೂರಪ್ಪ ಅವರು ಪ್ರಸ್ತಾಪಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಈ ಫ್ರೀಡಂ ಪಾರ್ಕ್‌ಗೆ ಚಂದ್ರಶೇಖರ್ ಆಜಾದ್ ಹೆಸರಿಡಿ ಎಂದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ನಗರದಲ್ಲಿ ಹಳೇ ಜೈಲನ್ನು ಸ್ಥಳಾಂತರಿಸಿ ಈ ಫ್ರೀಡಂ ಪಾರ್ಕ್ ಮಾಡಿದ್ದೆ. ಶಾಸಕರಾದ ಚೆನ್ನಬಸಪ್ಪನವರೇ, ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು. ನಿಮ್ಮ ಊರಿನವರು , ನನಗಂತೂ ಮಧು ಬಂಗಾರಪ್ಪ ಅವರು ಹೇಳಿದಂತೆ ಅಲ್ಲಮಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದ ಅವರು, ನೆರೆದಿದ್ದವರಿಗೆ ಅಲ್ಲಮಪ್ರಭು ಹೆಸರು ಆಗಬಹುದು ಎಂದು ಕೇಳಿದರು ಆಗ ನೆರೆದಿದ್ದವರು ಆಗಬಹುದು ಎಂದು ಕೂಗಿ ಹೆಸರಿಡಲು ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಯುವಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡಲು ಯುವನಿಧಿ ಕೊಟ್ಟಿದ್ದೇವೆ: ಡಿಸಿಎಂ ಡಿ ಕೆ ಶಿವಕುಮಾರ್
ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಶಿಮಮೊಗ್ಗ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಇಂದು ಚಾಲನೆ ನೀಡಲಾಯಿತು. ಯೋಜನೆಯ ಕೆಲ ಫಲಾನುಭವಿಗಳಿಗೆ ಚೆಕ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇತರ ಸಚಿವರುಗಳು ಚಾಲನೆ ನೀಡಿದರು. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿದರು. ರಾಜ್ಯ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಯುವನಿಧಿಯು ಕೊನೆಯ ಯೋಜನೆಯಾಗಿದೆ.