ಶಿವಮೊಗ್ಗ: ಭ್ರೂಣ ಹತ್ಯೆಯನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳ ಪರಿಶೀಲನೆ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ಪಿಸಿಪಿಎಂಡಿಟಿ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 9 ನೋಂದಾಯಿತ ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್ಗಳು ಮತ್ತು 90 ಖಾಸಗಿ ಸೆಂಟರ್ಗಳು ಇವೆ. ಸರ್ಕಾರಿ ಸಂಸ್ಥೆಗಳಲ್ಲಿ ಒಟ್ಟು 24 ಸ್ಕ್ಯಾನಿಂಗ್ ಯಂತ್ರಗಳಿದ್ದು, ಖಾಸಗಿ ಸಂಸ್ಥೆಗಳಲ್ಲಿ 141 ಯಂತ್ರಗಳಿವೆ. ಶಿವಮೊಗ್ಗ ನಗರದಲ್ಲೇ 52 ಖಾಸಗಿ ಸ್ಕ್ಯಾನಿಂಗ್ ಸಂಸ್ಥೆಗಳಿದ್ದು, 96 ಯಂತ್ರಗಳಿವೆ. ಪಿಸಿಪಿಎಂಡಿಟಿ ಕಾಯ್ದೆ ಪ್ರಕಾರ ಎಲ್ಲಾ ಸೆಂಟರ್ಗಳು ಕಾರ್ಯ ನಿರ್ವಹಿಸಬೇಕಾಗಿದ್ದು, ಈ ಕುರಿತು ಸಮಿತಿ ವತಿಯಿಂದ ಪರಿಶೀಲನೆ ಕೈಗೊಳ್ಳುವಂತೆ ಸೂಚಿಸಿದರು.
ಭ್ರೂಣಲಿಂಗ ಪತ್ತೆ ಕಾಯ್ದೆ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿಯನ್ನು ಆಯೋಜಿಸಬೇಕು. ಗ್ರಾಮೀಣ ಮಟ್ಟದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಮೂಲಕ ಭ್ರೂಣ ಹತ್ಯೆ ತಡೆಯಲು ಸಾಧ್ಯವಿದೆ ಎಂದು ಸಮಿತಿ ಸದಸ್ಯೆ ಡಾ. ವೀಣಾ ಭಟ್ ತಿಳಿಸಿದರು.
ನೋಂದಾಯಿತ ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದ್ದಲ್ಲಿ ಪ್ರಥಮ ಅಪರಾಧಕ್ಕೆ 3 ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗುವುದು. ಎರಡನೇ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಮತ್ತು 50 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು. ನ್ಯಾಯಾಲಯದಲ್ಲಿ ಅಪರಾಧ ನಿರ್ಣಯವಾಗುವ ತನಕ ಅವರ ನೋಂದಣಿ ತಡೆಹಿಡಿಯಲಾಗುವುದು. ಅಪರಾಧ ದೃಢಪಟ್ಟರೆ ಪ್ರಥಮ ಅಪರಾಧಕ್ಕೆ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ ಅವರ ಹೆಸರನ್ನು ಐದು ವರ್ಷಗಳ ಕಾಲ ತೆಗೆದು ಹಾಕಲಾಗುವುದು. ನಂತರದ ಅಪರಾಧಕ್ಕೆ ಶಾಶ್ವತವಾಗಿ ಹೆಸರನ್ನು ತೆಗೆದು ಹಾಕಲಾಗುವುದು ಎಂದು ಡಿಎಚ್‍ಒ ತಿಳಿಸಿದರು.
ಭ್ರೂಣ ಹತ್ಯೆಗೆ ಮಹಿಳೆ, ಆಕೆಯ ಪತಿ, ಸಂಬಂಧಿಕರು ಒತ್ತಾಯಿಸಿದರೆ ಅವರು ಸಹ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಿಗಳಾಗುತ್ತಾರೆ. ಮೊದಲ ಅಪರಾಧಕ್ಕೆ 3 ವರ್ಷಗಳ ತನಕ ಜೈಲು ಮತ್ತು 50ಸಾವಿರ ರೂ. ದಂಡ ವಿಧಿಸಲಾಗುವುದು. ನಂತರದ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ಈ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾಗಾರ ಸೇರಿದಂತೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.