ಶಿವಮೊಗ್ಗ: ಕಂದಾಯ ಇಲಾಖೆ, ಚುನಾವಣಾ ಶಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದ ಫಲಾನುಭವಿಗಳ ಮಾಹಿತಿ ದಾಖಲಿಸುವ ಜಿಲ್ಲಾ ದಾಖಲೆಗಳ ನಿರ್ವಹಣಾ ಕೇಂದ್ರವನ್ನು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಿಸಿ, ಈ ಕೇಂದ್ರದಲ್ಲಿ ಬೆಳೆ ಸಮೀಕ್ಷೆ, ನಗರ ಸರ್ವೇಕ್ಷಣ, ಚುನಾವಣೆ ಸಂಬಂಧಿಸಿದ ವಿಷಯಗಳು ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ದತ್ತಾಂಶಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಹೆಚ್ಚುವರಿಯಾಗಿರುವ, ಅನುಪಯುಕ್ತ ಹಾಗೂ ಸುಸ್ಥಿತಿಯಲ್ಲಿದ್ದ ಕಂಪ್ಯೂಟರ್‍ಗಳನ್ನು ಬಳಸಿಕೊಂಡು ಕಚೇರಿ ಆರಂಭಿಸಲಾಗಿದೆ. ಇದಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ ಹೈಸ್ಪೀಡ್ ಇಂಟರ್‍ನೆಟ್ ಸೌಲಭ್ಯವನ್ನು ಅಳವಡಿಸಲಾಗಿದೆ. ಈ ಕೇಂದ್ರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಇ-ಆಫೀಸ್‍ಗೆ ಚಾಲನೆ:
ಇದೇ ವೇಳೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಾಗದರಹಿತ ಕಚೇರಿಯನ್ನಾಗಿ ಪರಿವರ್ತಿಸಿದ ಇ-ಆಫೀಸ್‍ಗೆ ಜಿಲ್ಲಾಧಿಕಾರಿ ಚಾಲನೆ ಕೊಟ್ಟರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್, ತಹಶಿಲ್ದಾರ್ ಗಿರೀಶ್, ಚಂದ್ರಶೇಖರ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.